ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಅಪ್ಪಾ, ತಂದೇ...!

Published 18 ಜನವರಿ 2024, 21:07 IST
Last Updated 18 ಜನವರಿ 2024, 21:07 IST
ಅಕ್ಷರ ಗಾತ್ರ

‘ಲೇ ಗುಡ್ಡೆ, ಪೇಪರ್ ನೋಡಿದ್ಯಾ? ನಮ್ ಚೆಸ್ ಆಟಗಾರ ಪ್ರಜ್ಞಾನಂದ ವರ್ಲ್ಡ್ ಚಾಂಪಿಯನ್‌ನ ಸೋಲ್ಸಿ ಈಗ ವಿಶ್ವದ ನಂಬರ್‌ ಒನ್‌ ಆಟಗಾರ ಆಗ್ಯಾನಂತೆ. ಎಂಥ ಎಮ್ಮೆ ಅಲ್ವ?’ ಎಂದ ತೆಪರೇಸಿ.

‘ಎಮ್ಮೆ ಅಲ್ಲ, ಹೆಮ್ಮೆ’ ತಿದ್ದಿದ ದುಬ್ಬೀರ, ‘ಚೆಸ್ ಆಡಾಕೆ ಬಾಳ ಬುದ್ಧಿವಂತಿಕಿ ಬೇಕು, ಚೆಕ್ ಇಟ್ರೆ ಎದುರಿಗೆ ಕೂತೋನು ಹಂಗೇ ಪತರಗುಟ್ಟಬೇಕು’ ಎಂದ.

‘ಈ ಚೆಕ್ ಇಡೋದ್ರಲ್ಲಿ ನಮ್ ರಾಜಕಾರಣಿಗಳಿಗಿಂತ ಎಕ್ಸ್‌ಪರ್ಟ್ ಯಾರದಾರಲೆ, ಎಲೆಕ್ಷನ್ ಗೆಲ್ಲಾಕೆ ಅವರಿಗೆ ಇವ್ರು, ಇವರಿಗೆ ಅವ್ರು ಚೆಕ್ ಇಡ್ತಾನೇ ಇರ್ತಾರೆ’ ಗುಡ್ಡೆ ವಿಷಯಾಂತರ ಮಾಡಿದ.

‘ಗೊತ್ತು ಬಿಡಪ, ಇಂಡಿಯಾಕ್ಕೆ ಭಾರತ, ಟಿಪ್ಪುಗೆ ಸಾವರ್ಕರು, ಜೋಡೋಗೆ ಒಂದು ದೇಶ ಒಂದು ಕಾನೂನು... ಎದುರು ಪಕ್ಷದೋರು ಜಾಸ್ತಿ ಹಾರಾಡಿದ್ರೆ ಇ.ಡಿ. ಐಟಿ... ಇವೆಲ್ಲ ಚೆಕ್ ಇಟ್ಟಂಗೇ ತಾನೆ?’ ಕೊಟ್ರೇಶಿ ಒಂದೊಂದೇ ಬಿಡಿಸಿ ಹೇಳಿದ.

‘ಅಬಾಬಬ, ಎಷ್ಟು ಶಾಣ್ಯಾ ಅದೀಯಲ್ಲೋ ಕೊಟ್ರಾ. ಸರಿ, ಈಗ ಗ್ಯಾರಂಟಿಗೆ ಏನ್ ಚೆಕ್ಕು? ನ್ಯಾಯ ಯಾತ್ರೆಗೆ ಏನ್ ಚೆಕ್ಕು?’ ತೆಪರೇಸಿ ಕೇಳಿದ.

‘ಅದ್ಕೆಲ್ಲ ಮಂದಿರ ಐತಲ್ಲ, ಮಂದಿರ ತೋರ್ಸಿ ಚೆಕ್ ಇಡ್ತೀವಿ’.

‘ಮಂದಿರ ತೋರಿಸ್ತೀರಿ ಸರಿ, ಜನರ ಹೊಟ್ಟೆಗೆ ಏನ್ ತೋರಿಸ್ತೀರಿ, ಯುವಕರ ಕೆಲ್ಸಕ್ಕೆ ಏನ್ ದಾರಿ ತೋರಿಸ್ತೀರಿ?’ ಗುಡ್ಡೆ ತಕರಾರು.

ಯಾಕೋ ವಿಷಯ ಎಲ್ಲೆಲ್ಲಿಗೋ ಹೋಗ್ತತಿ ಅನ್ನಿಸಿ ದುಬ್ಬೀರ ‘ಈಗ ಅದು ಬಿಡ್ರೆಪ, ಈಗ ನಮ್ ತೆಪರೇಸಿಗೆ ಚೆಕ್ ಇಡೋರು ಯಾರು?’ ಎಂದ.

‘ತೆಪರನಿಗಾ? ಇನ್ಯಾರು ಅವನೆಂಡ್ತಿ ಪಮ್ಮಿ!’ ಕೊಟ್ರ ಕಿಸಕ್ಕೆಂದ.

‘ಲೇಯ್, ಸರಿಯಾಗಿ ಮಾತಾಡು ಮಗನೆ’ ತೆಪರೇಸಿಗೆ ಸಿಟ್ಟು ಬಂತು.

‘ಏನು? ಮಗನೆ ಅಂದ್ಯಾ? ಅಪ್ಪಾ ತಂದೇ... ಖರ್ಚಿಗೆ ಒಂದೆರಡು ಸಾವ್ರ ಪಾಕೆಟ್ ಮನಿ ತಳ್ಳು ಮುಂದೇ...’ ಎಂದ ಕೊಟ್ರ ನಾಟಕೀಯವಾಗಿ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT