ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಫಾರ್ಮೆನ್ಸ್‌ ಬೇಕು!

ಚುರುಮುರಿ
Last Updated 3 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಅಪರೂಪಕ್ಕೆ ಸಿಕ್ಕಿದ ಎಡವಟ್ಟು ಚಂದ್ರುವಿನ ಜೊತೆಗೆ ತುರೇಮಣೆಯವರ ಮನೆಗೆ ಬಂದೊ. ಪೇಪರ್ ಓದುತ್ತಿದ್ದ ಅವರು ‘ಬನ್ರೋ’ ಅಂತ ಸ್ವಾಗತಿಸಿ ಟೀ ಕುಡಿಸಿದರು.

‘ಮಂತ್ರಿ ಪದವಿ ತಲ್ಲಣ ಹೆಂಗೋ ಮುಗೀತಲ್ಲಾ ಸಾರ್’ ಅಂದೆ.

‘ಹ್ಞೂಂ ಕಣೋ, ಮಾಯ್ಕಾರ ಮೋದಿ-ಶಾ ಸೇರಿ ಸರ್ಕಾರಕ್ಕೆ ಹಿಡಿದಿದ್ದ ಬಾಲಗ್ರಹಗಳನ್ನ ಚೆನ್ನಾಗಿ ಬಿಡಿಸಿದರು. ವೀರಗಾಸೆ ಕುಣೀ
ತಿದ್ದೋವೆಲ್ಲಾ ಈಗ ಕೈಕಟ್ ಬಾಯ್ಮುಚ್ ಆಗವೆ. ಕೆಎಂಎಫ್‌ ಹುಲ್ಲುಗಾವಲಿಂದ ರೇವಣ್ಣೋರ ಎಮ್ಮೆ ಓಡಿಸಿ ಬೆಳಗೋವು ಬಂದದೆ. ಇದು ಎಷ್ಟು ಹಾಲು ಕರೆದತ್ತೋ ನೋಡಬೇಕು’ ಅಂದ್ರು.

‘ಸಾರ್ ಇದೂ ಬಾಲಗ್ರಹಾನ?’ ಅಂದ ಚಂದ್ರು ಅಮಾಯಕನ ಹಾಗೆ. ತುರೇಮಣೆ
ಯವರಿಗೆ ಸಿಟ್ಟು ಬಂದು ‘ಲೇ ಹೈವಾನ್ ಅದು ಬೇರೆ ಇದು ಬೇರೆ ಕಣೋ’ ಅಂತ ಗದರಿದರು. ಚಂದ್ರು ತೆಪ್ಪಗಾದ.

‘ಮಾಜಿಗಳು, ಅನರ್ಹರು ಎಲ್ಲೋದ್ರು ಸಾರ್? ಒಬ್ಬರನೂ ಕಾಣೆ’ ಅಂದೆ.

‘ನೋಡಪ್ಪಾ ಸಿದ್ದರಾಮಣ್ಣೋರು ಕರೀಕನ್ನಡಕ ಹಾಕ್ಯಂಡು ಬೈಕಂಡೋಯ್ತಾವರೆ. ಕುಮಾರಣ್ಣ ಮಲೇಷಿಯಾಕ್ಕೋಗಿ ಮನಗವ್ರೆ, ಅನರ್ಹರು ಸುಪ್ರೀಂ ಕೋರ್ಟ್ ಮುಂದೆ ‘ನ್ಯಾಯಾ ಎಲ್ಲಿದೇ’ ಅಂತ ಹಾಡೇಳಿಕಂಡು ಕೂತವರೆ. ಡಿಕೆಶಿಗೆ ಎಡೆ ಇಕ್ಕಕೂ ಬುಡದೆ ಇ.ಡಿ.ಯವರು ಗುಮ್ಮತಾವರೆ. ಯಡುರಪ್ಪಾರ ಬಾಲಕರು ಮನೆತಕ್ಕೋಗಿ ಮಂತ್ರಿಯಾಗ್ನಿಲ್ಲ ಅಂತ ಕಣ್ಣಿರಾಕ್ತಾವರೆ. ಪಾಪ ಅವರು ತಾನೆ ಏನು ಮಾಡಕ್ಕಾದದು ‘ಎಲ್ಲಾ ಟೈಟಾಗದೆ ಕನ್ರೋ’ ಅಂತ ಒಟ್ಟಿಗೆ ಅತ್ತು ಸಮಾಧಾನ ಮಾಡಿ ಕತಾವರೆ’ ಅಂತ ನಿಜಸ್ಥಿತಿ ಬಿಚ್ಚಿಟ್ಟರು ತುರೇಮಣೆ.

‘ಸಾರ್ ಈ ಮಂತ್ರಿಗಳದ್ದೂ ಎಷ್ಟು ದಿನ ಲೈಫು ಅಂತ ಗೊತ್ತಿಲ್ಲ. ಮುಂದೇನು?’ ಅಂತ ಕೇಳಿದೆ.

‘ಮುಂದೂ ಇಲ್ಲ ಹಿಂದೂ ಇಲ್ಲ ಪರ್ಫಾರ್ಮೆನ್ಸ್‌ ಮೇಲೆ ಇವರ ಭವಿಷ್ಯ ನಿಂತದೆ. ಎಲ್ಲಾರು ತಾಕತ್ ತಗಂಡು ಕೆಲಸ ಮಾಡದು ಒಂದೇ ದಾರಿ’ ಅಂದ್ರು ತುರೇಮಣೆ.

‘ಸಾರ್ ಪರ್ಫಾರ್ಮೆನ್ಸ್‌ ಜಾಸ್ತಿ ಮಾಡಕ್ಕೆ ಸ್ಟಿರಾಯ್ಡು, ಪೌಡರ್ ಆಮೇಲೆ ಜಪಾನಿ ತೈಲ ಬಳಸಿ ಅಂತ ಪೇಪರಲ್ಲಿ ಬಂದದಲ್ಲಾ ಅದುನ್ನ ಉಪಯೋಗಿಸಬೋದಲ್ವಾ?’ ಅಂದ ನಮ್ಮ ಚಂದ್ರುವಿನ ಮಾತು ಕೇಳಿ ಇವ ಅಂದ್ರಿಗಿನ ಬುದ್ಧಿವಂತ ಅನ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT