ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ದೇವ್ರಿಗೆ ಶರಣು

Last Updated 26 ಸೆಪ್ಟೆಂಬರ್ 2019, 1:37 IST
ಅಕ್ಷರ ಗಾತ್ರ

ಹೆಂಡತಿ ಸುಮಿ ಜೊತೆ ಹೊರಟಿದ್ದ ಶಂಕ್ರಿಯ ಬೈಕನ್ನು ಪೊಲೀಸರು ತಡೆದರು. ಎಲ್ಲಾ ಚೆಕ್ ಮಾಡಿ, ‘ನಿಮ್ಮ ಪುಣ್ಯ, ಟ್ರಾಫಿಕ್ ದಂಡ ಕಮ್ಮಿಯಾಗಿದೆ’ ಎಂದು ರಸೀದಿ ಕೊಟ್ಟರು.

‘ದಸರಾ ಡಿಸ್ಕೌಂಟಾ ಸಾರ್? ಹಾಗೇ ದೀಪಾವಳಿ, ಸಂಕ್ರಾಂತಿ, ಯುಗಾದಿಗೂ ಟ್ರಾಫಿಕ್ ದಂಡಕ್ಕೆ ಡಿಸ್ಕೌಂಟ್ ಕೊಡಬೇಕು ಸಾರ್’ ಹಲ್ಕಿರಿದ ಶಂಕ್ರಿ.

‘ಸರ್ಕಾರಿ ದೇವರು ಒಪ್ಪಿದರೆ ಡಿಸ್ಕೌಂಟ್ ಸಿಗುತ್ತೆ’ ಅಂದ್ರು ಸಾಹೇಬ್ರು.

‘ದೇವರು ಒಬ್ಬ ನಾಮ ಹಲವು. ಎಲ್ಲಾ ದೇವರಿಗಿಂತ ಸರ್ಕಾರಿ ದೇವರೇ ಶ್ರೇಷ್ಠ. ನಮ್ಮ ಕಷ್ಟ ಸುಖ ನೋಡಿಕೊಳ್ಳುವ ಸರ್ಕಾರಿ ದೇವರ ಕಷ್ಟಕ್ಕೆ ನಾವು ಹೀಗೆ ದಂಡ ಕಟ್ಟಿ ನೆರವಾಗುತ್ತೇವೆ’ ಶಂಕ್ರಿ ಭಕ್ತಿ ಪ್ರದರ್ಶಿಸಿದ.

‘ಪಂಚೆ, ಲುಂಗಿ, ಸೆರಗು, ವೇಲ್‌ ಏನಾದರೂ ಟೂ ವೀಲರ್ ಚಕ್ರಕ್ಕೆ ಸಿಕ್ಕಿ ಅಪಘಾತವಾಗ
ಬಹುದು. ಅಂತಹ ಡ್ರೆಸ್ ಹಾಕಿಕೊಂಡು ಗಾಡಿ ಏರಿದವರಿಗೂ ಫೈನ್ ಹಾಕಿ. ಮೊನ್ನೆ ನನ್ನ ಹೊಸ ರೇಷ್ಮೆ ಸೀರೆ ಸೆರಗು ಚಕ್ರಕ್ಕೆ ಸಿಕ್ಕಿ ಹರಿದೋಯ್ತು’ ಸುಮಿ ಸಂಕಟ ಹೇಳಿಕೊಂಡಳು.

‘ಬೈಕಿನಲ್ಲಿ ಗಂಡನ ಹಿಂದೆ ಕುಳಿತು ಮೊಬೈಲಿನಲ್ಲಿ ವಟವಟ ಅಂತ ಮಾತನಾಡುವ ಹೆಂಡ್ತಿಗೂ ದಂಡ ಹಾಕಿ’ ಅಂದ ಶಂಕ್ರಿ.

‘ಹೇರ್‌ಸ್ಟೈಲ್‌ ಕೆಡಬಾರದು ಅಂತ ಹೆಲ್ಮೆಟ್ ಧರಿಸದೆ ಮೊನ್ನೆ ಮದುವೆಗೆ ಹೊರಟಿದ್ದೆ, ಪೊಲೀಸರು ದಂಡ ಜಡಿದರು. ಮದುವೆ ಹೆಣ್ಣಿಗೆ ಕೊಡಬೇಕಾದ ಮುಯ್ಯಿ ಹಣವನ್ನು ಪೊಲೀಸರಿಗೆ ದಂಡ ಕೊಟ್ಟೆ’ ಅಂದಳು ಸುಮಿ.

‘ಮದುವೆ, ನಾಮಕರಣದಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಹೆಲ್ಮೆಟ್ ವಿನಾಯಿತಿ ನೀಡಿದರೆ ಮುಡಿ ಕೊಡುತ್ತೇವೆ ಅಂತ ಎಲ್ಲಾ ಗಂಡಂದಿರು ಸರ್ಕಾರಿ ದೇವರಿಗೆ ಹರಕೆ ಕಟ್ಟಿ ಕೊಳ್ಳಬೇಕು. ಇಲ್ಲದಿದ್ದರೆ ಮದುವೆಗೆ ಹೊರಡುವ ಹೆಂಡತಿಯ ಬ್ಯೂಟಿ ಪಾರ್ಲರ್‌ ಖರ್ಚಿನ ಜೊತೆಗೆ, ಹೇರ್‌ಸ್ಟೈಲ್‌ ಕೆಡುತ್ತದೆಂದು ಹೆಲ್ಮೆಟ್‌ ಧರಿಸದ್ದಕ್ಕೆ ದಂಡದ ಹಣಕ್ಕೂ ನಮ್ಮ ಜೇಬಿಗೆ ಕತ್ತರಿ ಬೀಳುತ್ತದೆ ಅಷ್ಟೆ’ ಅನ್ನುತ್ತಾ ಶಂಕ್ರಿ ಬೈಕ್ ಸ್ಟಾರ್ಟ್ ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT