ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾ? ನೀನಾ?

Last Updated 12 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಗುಡ್ಡೆ ಚಾದಂಗಡಿ ಮುಂದೆ ದುಬ್ಬೀರ- ತೆಪರೇಸಿ ನಡುವೆ ನಾನಾ-ನೀನಾ ವಾಗ್ಯುದ್ಧ ತಾರಕಕ್ಕೇರಿತ್ತು. ‘ನಾನು ರಾಜಾಹುಲಿ’ ಎಂದ ದುಬ್ಬೀರ. ‘ನಾನು ಪರಮಶಿವ’ ಎಂದ ತೆಪರೇಸಿ.

ಗುಡ್ಡೆಗೆ ಕೋಪ. ‘ಲೇಯ್ ಪರಮಶಿವ ತೆಪರಾನಂದ, ರಾಜಾಹುಲಿ ದುಬ್ಬೀರ ಇಬ್ರೂ ಎದ್ದು ನಡೀರಿ ಅತ್ಲಾಗೆ. ಇಲ್ಲಿ ಗಿರಾಕಿಗಳಿಗೆ ತೊಂದ್ರೆ ಆಗ್ತತಿ’ ಎಂದ.

‘ಲೇ ಗುಡ್ಡೆ, ನಾವೂ ಗಿರಾಕಿಗಳೇ. ಬೈಟೂ ಚಾ ಹಾಕು’ ಎಂದ ದುಬ್ಬೀರ ‘ನಾನೇ ರಾಜಾಹುಲಿ, ಮೂರೂವರೆ ವರ್ಷ ನಂದೇ ರಾಜ್ಯಭಾರ’ ಎಂದ.

ತೆಪರೇಸಿ ಏನ್ ಕಮ್ಮಿ? ‘ಈ ರಾಜ್ಯ ನಿನ್ನದಿರಬಹುದು. ಆದ್ರೆ ನಾನು ಒಂದು ದೇಶಾನೇ ಖರೀದಿಸಿದೀನಿ, ಅದಕ್ಕೆ ನಾನೇ ಅಧಿಪತಿ’ ಎಂದ.

‘ಇಲ್ಲಿ ನಾನು ಹೇಳಿದೋರೇ ಮಂತ್ರಿ. ಹೈಕಮಾಂಡ್ ಅಪ್ಪಣೆ ಬೇಕಿಲ್ಲ’ ರಾಜಾಹುಲಿ ದುಬ್ಬೀರನ ವಾದ. ‘ನನಗೆ ಹೈಕಮಾಂಡೇ ಇಲ್ಲ. ನೀನು 34 ಜನರನ್ನು ಮಾತ್ರ ಮಂತ್ರಿ ಮಾಡಬಹುದು, ನನಗೆ ಆ ಮಿತಿ ಇಲ್ಲ’ ತೆಪರಾನಂದನ ಪ್ರತಿವಾದ. ಗುಡ್ಡೆಗೆ ನಗು ಬಂತು. ‘ಲೇ ತೆಪರಾನಂದ, ಹೋದ ವರ್ಷ ನಾನೇ ಶ್ರೀಕೃಷ್ಣ ಅಂತಿದ್ದೆ. ಈಗ ಪರಮಶಿವಾನಾ?

‘ಸುಮ್ಕಿರಲೆ, ಮುಂದಿನ ವರ್ಷ ನಾನೇ ಶ್ರೀರಾಮ ಅಂತೀನಪ ನಿಂಗೇನು?’ ತೆಪರೇಸಿ ಗುರ್ ಅಂದ. ‘ನನ್ನ ಕಂಡ್ರೆ ಪ್ರಧಾನಿನೇ ಎದ್ದು ನಿಲ್ತಾರೆ ಗೊತ್ತಾ?’ ದುಬ್ಬೀರನ ವಾದ. ‘ನಾನು ಕೈ ತೋರಿಸಿದ್ರೆ ಸೂರ್ಯನೇ ತಡವಾಗಿ ಉದಯಿಸ್ತಾನೆ ಗೊತ್ತಾ?’ ತೆಪರೇಸಿ ಉತ್ತರ.

‘ನಾನು ರಾಜಾಹುಲಿ ಅಷ್ಟೇ ಅಲ್ಲ, ಪುಣ್ಯಕೋಟಿನೂ ಹೌದು. ಕೊಟ್ಟ ಭಾಷೆಗೆ ತಪ್ಪೋನಲ್ಲ, ನಂಬಿದವರ ಕೈ ಬಿಡೋದಿಲ್ಲ’.

‘ನಾನು ಸರ್ವಶಕ್ತ, ಈ ಜಗತ್ತೇ ನನ್ನ ನಿಯಂತ್ರಣದಲ್ಲಿದೆ. ನಾನು ಯಾರಿಗೂ ಹೆದರೋದಿಲ್ಲ...’

ಇವರ ತರ‍್ಲೆ ಮಾತು ಹೇಗೆ ನಿಲ್ಲಿಸೋದು ಅಂತ ಯೋಚಿಸಿದ ಗುಡ್ಡೆ ಇಬ್ಬರನ್ನೂ ಕೂಗಿ ‘ಲೇಯ್ ನಿಮ್ ಹೆಂಡ್ತೀರು ನನ್ ಮೊಬೈಲ್‍ಗೆ ಕಾಲ್ ಮಾಡ್ತಾವ್ರೆ’ ಎಂದ.

‘ಅಯ್ಯಪ್ಪ, ಏನಂತೆ?’

‘ಮನೇಲಿ ಮುಸುರೆ ಪಾತ್ರೆ ರಾಶಿ ಬಿದ್ದಿದಾವಂತೆ, ತೊಳಿಯೋಕೆ ಹೋಗಬೇಕಂತೆ!’ ಇಬ್ಬರೂ ತೆಪ್ಪಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT