ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಯ ಡೇಔಟ್‌

Last Updated 20 ಜನವರಿ 2020, 20:00 IST
ಅಕ್ಷರ ಗಾತ್ರ

‘ದೇವಾ... ಕೈಲಾಸ ಪರ್ವತದಲ್ಲಿಯೇ ಇದ್ದು ಬೇಸರವಾಗಿದೆ. ಕೆಳಗಿಳಿದು ಉತ್ತರಾಖಂಡದಲ್ಲಿ ತುಸು ಅಡ್ಡಾಡಿ ಬರುವೆ’ ಎಂದು ಶಿವನ ಬಳಿ ಪಾರ್ವತಿ ಉಲಿದಳು. ಚಳಿಗಾಲವಾದ್ದರಿಂದ ಬಿಸಿಲಿಗೆ ಕೂತಲ್ಲೇ ತೂಕಡಿಸುತ್ತಿದ್ದ ಶಿವ ಎಚ್ಚೆತ್ತು, ‘ದೇವಿ... ಸಹಸ್ರಮಾನಗಳೇ ಕಳೆದುವಲ್ಲವೇ ನಾವು ಭರತಖಂಡಕ್ಕೆ ಭೇಟಿ ನೀಡದೆ. ಅಲ್ಲೀಗ ದೇವಭಾಷೆ ಸಂಸ್ಕೃತ ಯಾರೂ ಮಾತಾಡದೆ ಸತ್ತಿದೆಯಂತೆ. ಹೇಗೆ ಓಡಾಡುವೆ ನೀನು’ ಗಾಬರಿಬಿದ್ದು ಕೇಳಿದ.

‘ಉತ್ತರಾಖಂಡದಲ್ಲೀಗ ಜನ ಮಾತಾಡುವ ಉರ್ದು ಬದಲಿಗೆ ದೇವಭಾಷೆ ಸಂಸ್ಕೃತದಲ್ಲಿ ಬೋರ್ಡು ಬರೆಸುತ್ತಿಹರಂತೆ. ಹೀಗಾಗಿ ಅಲ್ಲಿ ಅಡ್ಡಾಡಲು ಕಷ್ಟವಾಗದು’ ಉತ್ತರಾಖಂಡದ ಸುದ್ದಿಯನ್ನು ತೋರಿಸುತ್ತ ಪಾರ್ವತಿ ನಕ್ಕಳು.

ಪತ್ನಿಯ ಚಾತುರ್ಯಕ್ಕೆ ಮೆಚ್ಚಿದ ಶಿವ. ‘ಹೋಗಿ ಬಾ ದೇವಿ, ಆದರೆ ಹಾಗೆಯೇ ತುಸು ಕೆಳಗಿಳಿದು ನಿನ್ನ ತಂಗಿ ಗಂಗೆಯನ್ನು ನೋಡಲು ಮಾತ್ರ ಹೋಗದಿರು. ಅವಳ ಒಡಲಿನಲ್ಲಿ ಅದಾವುದೋ ಬ್ಯಾಕ್ಟೀರಿಯಾ ಲಕ್ಷಗಟ್ಟಲೆ ಇವೆಯಂತೆ. ಮುಟ್ಟಲಾಗದಷ್ಟು ಮಲಿನೆಯಾಗಿರುವಳು ನನ್ನ ಗಂಗೆ’ ಪಾರ್ವತಿಗೆ ಎಚ್ಚರಿಸುತ್ತಲೇ ಗಂಗೆಯ ಸ್ಥಿತಿ ನೆನೆದುಶಿವ ಗದ್ಗದಿತನಾದ.

‘ಹಾಗಾದರೆ ಅಲ್ಲಿಂದ ಕರುನಾಡ ದೇವಿಯ ನುಡಿಜಾತ್ರೆಗೆ ಹೋಗಿ ಬರುವೆ. ನಮ್ಮ ಕನ್ನಡದ ಕುವರ–ಕುವರಿಯರು ಅದಾವ ಬಗೆಯ ಗ್ರಂಥ ಬರೆದಿಹರೆಂದು ನೋಡಿ ಬರುವೆ’ ಎಂದಳು. ‘ಅಯ್ಯೋ ದೇವಿ... ನುಡಿಜಾತ್ರೆಯೊಳು ನಡೆಯುವ ಪುಸ್ತಕ ಜಾತ್ರೆಯೊಳು ಮಾತ್ರ ಕಾಲಿಡದಿರು. ಅಲ್ಲಿ ನಮ್ಮೆಣಿಕೆ ಮೀರಿದ ಅವ್ಯವಸ್ಥೆಯಂತೆ. ಸುಕೋಮಲೆಯಾದ ನಿನ್ನ, ದೂಳು, ಗದ್ದಲ, ನೂಕುನುಗ್ಗಲಿನ ಮಧ್ಯೆ ತುಳಿದುಹಾಕುವರು’ ಶಿವ ಆತಂಕದಿಂದ ಹೇಳಿದ.

‘ಆಗಲಿ ದೇವಾ, ಉತ್ತರಾಖಂಡಕ್ಕೆ ಮಾತ್ರ ಹೋಗುವೆ’ ಎನ್ನುತ್ತ ಇನ್ನೇನು ಕೆಳಗಿಳಿಯಬೇಕು... ಅಷ್ಟರಲ್ಲಿ ಶಿವ ‘ಈಗ ಭರತಖಂಡದಲ್ಲಿ ಇರಲು ಗುರುತುಪತ್ರ ಬೇಕಂತೆ. ಮೂರು ರಾಷ್ಟ್ರಗಳಿಂದ ಬಂದ ಕೆಲವರು ಮಾತ್ರ ‘ಓಕೆ’ಯಂತೆ. ಆದರೆ ಆ ಪಟ್ಟಿಯೊಳು ಕೈಲಾಸವಿಲ್ಲ. ನೀನು ಹಿಂದೂಗಳ ದೇವತೆಯಾಗಿರಬಹುದು, ಆದರೆ ನೀನೂ ಒಬ್ಬಳು ಹಿಂದೂ ಎನ್ನಲು ನಮ್ಮ ಬಳಿ ಆಧಾರವೇನಿದೆ ದೇವಿ’ ಎಂದು ಇನ್ನಷ್ಟು ಗಾಬರಿಯಾದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT