ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಎಫ್‌.ಬಿ ಮುಟ್ಟಾಕಿಲ್ಲ!

Last Updated 3 ಮಾರ್ಚ್ 2020, 19:43 IST
ಅಕ್ಷರ ಗಾತ್ರ

‘ಇಪ್ಪತ್ನಾಲ್ಕು ತಾಸೂ ಮೊಬೈಲ್ ಹಿಡ್ಕೊಂಡೇ ಇರ್ತೀಯಲ್ಲ... ಒಂದೊಳ್ಳೆ ಕೆಲಸ ಮಾಡಲಿಲ್ಲ, ಒಂದೊಳ್ಳೆ ಪುಸ್ತಕ ಓದಲಿಲ್ಲ’ ಒಂದೇ ಸಮನೆ ಬೈಯ್ಯತೊಡಗಿದಳು ಅಮ್ಮ.

‘ಶನಿವಾರ ಬೆಳ್ ಬೆಳಿಗ್ಗೆನೇ ಯಾಕಮ್ಮ ಹಿಂಗೆ ಮಂಗಳಾರತಿ ಮಾಡ್ತಿದಿಯಾ... ನನ್ಪೋಸ್ಟ್‌ಗಳಿಗೆ ಬರೋ ಕಮೆಂಟು, ಫೋಟೊಗಳಿಗೆ ಬೀಳೋ ಲೈಕ್ಸು ನೋಡಿಯೂ, ಏನ್ ಕೆಲಸ ಮಾಡಿದೀಯಾ ಅಂತ ಕೇಳ್ತಿಯಲ್ಲ... ಟ್ವಿಟರ್‌ನಲ್ಲಿ ಯಾವಾಗಲೂ ನಾನೇ ಟ್ರೆಂಡಿಂಗ್ ಗೊತ್ತಾ’ ಸಾಧನೆ ಹೇಳ್ಕೊಂಡೆ.

‘ಕೆಲಸ ಮಾಡಿ ನಿನ್ ಸಾಮರ್ಥ್ಯ ತೋರ್ಸು... ಇಂಥ ಗಿಮಿಕ್ ಎಲ್ಲ ಬೇಡ’ ಮುಖಕ್ಕೆ ಹೊಡೆದಂಗೆ ಹೇಳ್ತು ಮದರ್ ಇಂಡಿಯಾ.

‘ಆಯ್ತಮ್ಮ, ಈ ಭಾನುವಾರದಿಂದಲೇ ಫೇಸ್‌ಬುಕ್ ಅಕೌಂಟ್ ಕ್ಲೋಸ್. ಟ್ವಿಟರ್ ಬಂದ್, ಇನ್‌ಸ್ಟಾಗ್ರಾಂ ಬಂದ್, ಯೂಟ್ಯೂಬ್ ನೋಡೋದ್ ಬಂದ್, ಎಲ್ಲ ಬಂದ್ ಬಂದ್ ಬಂದ್’ ಶಪಥ ಮಾಡಿದೆ.

‘ಏನ್ ಅಮ್ಮನವರೇ, ನಿಮ್ ಮಗ ಊರಲ್ಲಿ ಇಲ್ವ... ಒಂದ್ ವಾರದಿಂದ ಒಂದೂ ಟ್ವೀಟ್ ಮಾಡಿಲ್ಲ, ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕ್ಕೊಂಡಿಲ್ಲ, ನಮ್ ಸ್ಟೇಟಸ್ಸೂ ನೋಡಿಲ್ಲ’ ಕೇಳಿದ್ರು ಪಕ್ಕದ ಮನೆಯವರು.

‘ಈಗವನು ಸೋಷಿಯಲ್ ಮೀಡಿಯಾ ಬಳಸ್ತಿಲ್ಲ. ಹೀಗಾಗಿ ಅವನು ಇರೋದು ನಿಮ್ ಗಮನಕ್ಕೆ ಬಂದಿಲ್ಲ’ ನಕ್ಕು ಹೊರಟಳು ಅಮ್ಮ.‘ದಿನಕ್ಕೆ ನಾಲ್ಕು ಸಲ ಡಿ.ಪಿ ಚೇಂಜ್ ಮಾಡ್ತಿದ್ದ, ಡೈಲಿ ಐದಾರು ಸೂಟು-ಬೂಟು ಬದಲಾಯಿಸ್ತಾ, ಆ ಎಲ್ಲ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಹಾಕ್ತಿದ್ದ ನಿಮ್ಮ ಮಗ... ಈಗ ಎಲ್ಲಿ ಹೋದ’ ಅಮ್ಮನ ಮೇಲೆ ಪ್ರಶ್ನೆಗಳ ದಾಳಿ ಹೆಚ್ಚಾಗತೊಡಗಿತು.

ಬೇಸತ್ತ ಅಮ್ಮ ಬಂದು ಹೇಳಿದಳು,‘ನೋಡು ಮಾರಾಯ, ನೀನು ಕೆಲಸ ಮಾಡದಿದ್ರೂ ಚಿಂತೆ ಇಲ್ಲ, ಓದದಿದ್ರೂ ಅಡ್ಡಿ ಇಲ್ಲ, ಮನೆ ಮಾರೋ ಪರಿಸ್ಥಿತಿ ಬಂದರೂ ಪರವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರು... ಭಾಷಣದ ವಿಡಿಯೊ, ಪ್ರವಾಸದ ಫೋಟೊ ಹಾಕು... ಮನೆ ಉದ್ಧಾರ ಆಗದಿದ್ರೂ, ನಿನ್ನ ಫ್ಯಾನ್‌ಗಳಿಗಾದ್ರೂ ಖುಷಿಯಾಗ್ಲಿ’ ಎಂದು ಫೋನ್ ಕೈಗಿಟ್ಟು ಒಳಹೋದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT