ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಯುಗಾದಿ ವರ್ಷಭವಿಷ್ಯ!

Last Updated 24 ಮಾರ್ಚ್ 2020, 3:25 IST
ಅಕ್ಷರ ಗಾತ್ರ

ಶಾರ್ವರಿ ನಾಮ ಸಂವತ್ಸರದಲ್ಲಿ ಭಾರತಕ್ಕೆ ಕೊರೊನಾ ಎಂಬ ಕಾಲಪುರುಷನು ಕಿರೀಟಧಾರಿಯಾಗಿ, ಮೂತಿಗೆ ಕಪ್ಪು ಮುಸುಕನ್ನು ಹಾಕಿ, ಚೀನಾದ ಕಡೆಯಿಂದ ವಕ್ಕರಿಸಿ ಮುಂಬೈ ಕಡೆಯಿಂದ ತೆರಳುವನು. ಈತನು ಕಿರೀಟ ಧರಿಸಿ ಹಂದಿಯ ಮೇಲೆ ಕುಳಿತು, ಕೈಯ್ಯಲ್ಲಿ ಹಕ್ಕಿ, ಬೇಳೆ-ಕಾಳು, ಪೆಟ್ರೋಲ್-ಡೀಸೆಲ್, ಚಿನ್ನವನ್ನು ಹಿಡಿದಿರುವನು. ಈತನು ಸದಾ ಕೆಮ್ಮುತ್ತಾ, ನಡುಗುತ್ತಾ, ಸೀನುತ್ತಿರುವುದರಿಂದ ದೇಶದ ಜನರಿಗೆ ಉಚಿತ ಕೊರೊನಾ ಭಾಗ್ಯ! ಲಾಕ್ ಡೌನ್, ಕಡ್ಡಾಯ ಗೃಹಬಂಧನವು. ಅಲ್ಲದೆ ಕಾಲಪುರುಷನು ಕೈಯ್ಯಲ್ಲಿ ಹಿಡಿದ ಎಲ್ಲ ವಸ್ತುಗಳೂ ತುಟ್ಟಿಯಾಗುವುವು.

ರಾಷ್ಟ್ರದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಿಲ್ಲ. ಬಿಜೆಪಿಯೇತರ ಸರ್ಕಾರಗಳಲ್ಲಿ ಚಳೀಜ್ವರ, ಸೋಡಾಚೀಟಿ ಹೆಚ್ಚುವುವು. ಜಿಎಸ್‍ಟಿ, ದಿನಸಿ, ತರಕಾರಿ, ಹಾಲಿನ ದರ ಏರುವುವು. ಜನತಾ ಕರ್ಫ್ಯೂ ಹೆಚ್ಚಳ ಸಾಧ್ಯತೆ! ಆರ್ಥಿಕತೆಗೆ ಬಾಲಗ್ರಹಪೀಡೆ.

ರಾಜ್ಯದಲ್ಲಿ ತೆರಿಗೆ ಆದಾಯ ಗೋತಾ. ಅಧಿಕಾರವಂಚಿತ ವೈರಸ್ಸುಗಳಿಂದ ಸರ್ಕಾರದ ಉಷ್ಣಾಂಶ ಹೆಚ್ಚಳ. ಮುಖ್ಯಮಂತ್ರಿಗಳು ಸೋಂಕಿತರ ರೋಗೋಪಚಾರ ಮಾಡಿ ಛಲೋಪಾಸಕ ಮಂತ್ರ ಪಠಿಸುವುದರಿಂದ ಕುರ್ಚಿಗೆ ಶ್ರೇಯಸ್ಸು. ಮಾಜಿ ಮುಖ್ಯಮಂತ್ರಿಗಳಿಗೆ ಚೀರ್ತನೆ ಕಾಯಂ. ಡಿಕೆಗೆ ಕಪ್ಪೆಗಳ ಹಿಡಿದು ಕೂಡಿಹಾಕುವ ವ್ಯಾಯಾಮ ಯೋಗ. ಮಸ್ತಕ ಜ್ವರದ ಭಯದಿಂದ ಜನನಾಯಕರು ಗೃಹ ಕೈಗಾರಿಕೆ, ಭೋಗನಿದ್ರೆಗಳಲ್ಲಿ ಮಗ್ನ.

ಜನಸಾಮಾನ್ಯರಿಗೆ ಗುರುಬಲವಿಲ್ಲದ್ದರಿಂದ ಬೇವು ಜಾಸ್ತಿ, ಕೋಳಿ-ಕುರಿ ನಾಸ್ತಿ. ಕಾಸುಳ್ಳವರಿಗೆ ಕಾಸುಪತಾಸ್ತ್ರ, ಕಾಸಿಲ್ಲದವರಿಗೆ ಕೈಸಾಲ! ಮಾಲ್‍ಗಳ ಭೇಟಿಯಿಂದ ಉದರಬಾಧೆ, ಮಾಸಿಕ ವ್ಯಥೆ. ಮದ್ಯ ವಯಸ್ಸಿನ ಚಟ ಚಕ್ರವರ್ತಿಗಳಿಗೆ ಬಾಯಿಗೆ ಬೀಗ. ಮನೆಗಳಲ್ಲಿ ಹರ್ಷೋಲ್ಲಾಸ! ರಜದ ಮಹೋತ್ಸವದ ಕಾರಣ ಬಾಲಕಪಿಗಳ ತಂಟೆಗಳು ತೀವ್ರ. ಸಿನಿಮಾ ಬಂದ್ ಕಾರಣ ಮಾನಸಿಕ ನೆಮ್ಮದಿ.

ಉತ್ತಮ ಬೆಳೆಯಾದರೂ ರೈತರ ಬಾಯಿಗೆ ಮಣ್ಣು, ಕಾರ್ಮಿಕರ ಕಣ್ಣಿಗೆ ಸುಣ್ಣ! ಬೃಹತ್ ಪಾಲಿಕೆಗಳಿಗೆ ಚಂದ್ರದೆಸೆ. ತೆರಿಗೆ ಮುಂಡನ, ಹಳೇ ರೋಡಿಗೆ ಹೊಸ ಬಿಲ್ಲು, ಕಸ ವೈರಸ್ ಕಂಟಕ ನಿರಂತರ. ಸರ್ವೇ ಜನಾ ಶೀಘ್ರ ಮಲ್ಟಿಕುಸಿನೋ ಭವಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT