ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಂ ದಶಗುಣಂ

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

‘ಇವತ್ತು ಮೂರು ಲಾಠಿ ಮುರಿದು ಹಾಕಿದೆ...’ ಡ್ಯೂಟಿ ಮುಗಿಸಿ ಮನೆಗೆ ಬಂದ ಕಾನ್‌ಸ್ಟೆಬಲ್ ಶಂಕ್ರಿ ಹೇಳಿದರು.

‘ಕೊರೊನಾ ಕರ್ಫ್ಯೂ ಶುರುವಾದಾಗಿನಿಂದ ಒಟ್ಟು ಎಷ್ಟು ಲಾಠಿ ಮುರಿದಿರಿ ನೀವು?’ ಪತ್ನಿ ಸುಮಿ ಕೇಳಿದರು.

‘ಇಪ್ಪತ್ತಾರು ಆಗಿವೆ. ನಮ್ಮ ಸ್ಟೇಷನ್‍ನಲ್ಲಿ ನಾನೇ ಅತಿ ಹೆಚ್ಚು ಲಾಠಿ ಮುರಿದಿದ್ದು, ಸಾಹೇಬ್ರು ಭೇಷ್ ಅಂದ್ರು’.

‘ಇಷ್ಟೊಂದು ಲಾಠಿ ಮುರಿದು ಹಾಕಿರುವ ನಿಮಗೆ ಪ್ರಮೋಷನ್ ಸಿಗುತ್ತೆ ಅಲ್ಲವೇನ್ರೀ?’ ಸುಮಿಗೆ ಆಸೆ.

‘ಇಲಾಖೆಯಲ್ಲಿ ಯಾರೂ ಕಡ್ಡಿ ಆಡಿಸದಿದ್ರೆ ಪ್ರಮೋಷನ್ ಸಿಗುತ್ತೆ’ ಶಂಕ್ರಿಗೆ ವಿಶ್ವಾಸ.

‘ಸಿಗಲೇಬೇಕು, ರಸ್ತೆಯಲ್ಲಿ ಅಡ್ಡಾದಿಡ್ಡಿ
ಓಡಾಡುವವರನ್ನು ಬೆಂಡೆತ್ತಿ, ಕೊರೊನಾ ವೈರಸ್‌ ಕಂಟ್ರೋಲ್ ಮಾಡಿದ್ದೀರಲ್ಲ’.

‘ಹೌದು, ಕಾಯಿಲೆ ಬಂದ ಮೇಲೆ ಡಾಕ್ಟರ್‌ ಚಿಕಿತ್ಸೆ ಕೊಡ್ತಾರೆ, ನಾವು ಲಾಠಿ ಬೀಸಿ ಕಾಯಿಲೆ ಬರದಂತೆ ತಡೀತೇವೆ. ನಮ್ಮದೂ ದೊಡ್ಡ ಸೇವೆ’.

‘ಕೊರೊನಾ ವಿಷಯದಲ್ಲಿ, ವೈದ್ಯರ ಸಿರಿಂಜ್, ಸ್ಟೆತಾಸ್ಕೋಪಿಗಿಂಥ ನಿಮ್ಮ ಲಾಠಿಗೇ ಸ್ಕೋಪ್ ಜಾಸ್ತಿ’ ಸುಮಿಯ ಹೊಗಳಿಕೆ.

‘ಹೌದು, ನಮ್ಮ ಸಾಹೇಬ್ರು ಆಫ್ ದಿ ರೆಕಾರ್ಡ್‌ನಲ್ಲಿ ಇದನ್ನೇ ಹೇಳ್ತಿದ್ರು. ಕೊರೊನಾ ಸೋಂಕು ತಗುಲಿ ಜನ ಆಸ್ಪತ್ರೆ ಸೇರೋ ಬದಲು, ಪೊಲೀಸರಿಂದ ಒದೆ ತಿಂದು ಮನೇಲಿ ಮುಲಾಮು ಹಚ್ಕೊಳ್ಳೋದೇ ಉತ್ತಮ ಅಂತ’.

‘ಮೊನ್ನೆ, ವನಜಾಕ್ಷಿ ಗಂಡನಿಗೂ ಲಾಠಿ ಬೀಸಿ ಬೆನ್ನ ಮೇಲೆ ಬರೆ ಬರುವಂತೆ ಬಾರಿಸಿದ್ದೀರಂತೆ. ಅವಳು ಹೇಳಿಕೊಂಡು ಅತ್ತಳು. ನಿಮ್ಮ ಒದೆ ತಿಂದ ಗಂಡ ಹಾಸಿಗೆಯಿಂದ ಮೇಲೆದ್ದಿಲ್ಲವಂತೆ’.

‘ಹೌದೇ?! ಡ್ಯೂಟಿ ಮೇಲಿದ್ದಾಗ ನಾನು ಮುಖ-ಮೂತಿ ನೋಡಲ್ಲ. ಆಕೆ ಗಂಡ ಮಾಸ್ಕ್ ಹಾಕಿಕೊಂಡಿದ್ದನೇನೊ ಗುರುತು ಸಿಗಲಿಲ್ಲ’.

‘ಹಾಗಂತ, ಸ್ನೇಹಿತೆ ಗಂಡನಿಗೆ ಬಾರಿಸಿದರೆ ಸಂಬಂಧ ಉಳಿಯುತ್ತೇನ್ರೀ? ಈಗ ವನಜಾಕ್ಷಿ ಮನೆಗೆ ದಿನಸಿ, ತರಕಾರಿ ತಂದುಕೊಡುವವರು ಇಲ್ಲ. ಅವಳ ಗಂಡ ಚೇತರಿಸಿಕೊಳ್ಳೋತನಕ ನೀವೇ ಅವಳ ಮನೆಗೆ ಬೇಕಾದ ಸಾಮಾನು ತಂದುಕೊಡ್ರೀ...’ ಸುಮಿ ಕಟ್ಟಾಜ್ಞೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT