ಭಾನುವಾರ, ಆಗಸ್ಟ್ 14, 2022
19 °C

ಚುರುಮುರಿ: ಆತ್ಮವಿಚಾರ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಭರತಖಂಡದಲ್ಲಿ ನಮೋ ಎಂಬ ಮೋಡಿಗಾರನು ಆಳುವಾಗ, ಕರ್ನಾಟಕದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಸೃಷ್ಟಿಸಿ ಕಮಲ ವಂಶದ ರಾಜಾಹುಲಿ ಅಧಿಕಾರಕ್ಕೆ ಬಂದನು. ಅಧಿಕಾರಬಲ ಕೊಟ್ಟ ತಬ್ಬುಲಿಗಳಿಗೆ ಮಂತ್ರೀಭೋಗ ಕಲ್ಪಿಸಿ ವಚನಬದ್ಧನಾಗಲು ಆತನಿಗೆ ದೈವಬಲ ದೊರಕಲಿಲ್ಲ.

ಅಧಿಕಾರದ ಪ್ರೇತಃಕಾಲದಲ್ಲಿ ಕಾಡತೊಡಗಿದ ಕೊರೊನಾ ಮಾರಿಯ ನಿಯಂತ್ರಣದಲ್ಲಿ ರಾಜಾಹುಲಿಯೇ ಛಲೋಪಾಸಕನಂತೆ ಸರ್ವಕಾರ್ಯಗಳ ಉಸ್ತುವಾರಿ ನಡೆಸಿ ಯಶಸ್ವಿಯಾದನು.

ಅತಿವೃಷ್ಟಿ- ಅನಾವೃಷ್ಟಿಗಳಾದರೂ ಮೋಡಿ ಮಹಾರಾಜರು ಪರಿಹಾರವನ್ನು ದಯಪಾಲಿಸದೆ ಗಡ್ಡದ ಮರೆಯಲ್ಲೇ ಛೂಬಾಣ ಹೂಡಿದರು. ದಾವಾಗ್ನಿಯನ್ನು ನುಂಗಿದ ರಾಜಾಹುಲಿಯು ತಾಳ್ಮೆಯಿಂದ ವರುಣಾಘಾತವನ್ನು ನಿಭಾಯಿಸಿದನು. ನಂತರ ಡಿ.ಜೆ. ಹಳ್ಳಿಯ ತೊಂದ್ರಜಿತರೂ ತಳಪಾಕ ಹೆಚ್ಚಿಸಿದರು.

ಮೀಸಲಾತಿ ಧಮಕಿಗಳೂ ಮರಾಠ ಮಸಾಲೆ, ನಿಗಮಗಳ ತಲ್ಲಣಗಳ ಜೊತೆಗೆ ಮೂಲವ್ಯಾಧಿ, ವಲಸೆ ವಾದ್ಯಗಳು ಹಾಗೂ ಸ್ಥಾನಪಲ್ಲಟ ಯತ್ನಗಳೂ ರಾಜಾಹುಲಿಗೆ ಹಿಂಸತೂಲಿಕಾತಲ್ಪದ ಅನುಭವ ಉಂಟು ಮಾಡುತ್ತಿದ್ದವು. ವಿಸ್ತರಣಾ ಯೋಗಕ್ಕೆ ತ್ರಿಮೂರ್ತಿಗಳ ದರ್ಶನ ಭಾಗ್ಯ ಲಭಿಸದೇ ಪಕ್ಷವಾತ ಉಂಟಾಗತೊಡಗಿತು. ‘ಹ್ಞಾಂ ವಿಧಿಯೇ! ಸಂಧಿಮಾರ್ಗದಲ್ಲೂ ಸೋಲಾಯಮಾನವೇ? ನಂಬಿದ ಶುಕ-ಪಿಕಗಳಿಗೆ ನಾಶಕವಿತೆಯೇ?’ ಎಂದು ಖಿನ್ನನಾದ ರಾಜಾಹುಲಿಯು ಕುಲದೇವತೆಯ ಚರಣಾಗತನಾದನು.

ದಿಲ್ಲಿ ಉಸ್ತುವಾರಿ ದೈವವು ಹುಲಿಯನ್ನು ಕಂಡು ಸಹತಪಿಸಿ ‘ಎಲೈ ರಾಜಾಹುಲಿಯೇ ಕರ್ಮಗಳಿಗೆ ಮಾತ್ರ ನೀನು ಬಾಧ್ಯಸ್ಥ. ಫಲಾಫಲಗಳ ಚಿಂತೆಯೇಕೆ? ತ್ರಿಮೂರ್ತಿಗಳ ನಿಗೂಢ ನೀತಿಗಳನ್ನು ಅರ್ಥೈಸಿಕೋ. ವಿಸ್ತರಣೆಯ ಅಭಯಸಂಕಟವನ್ನು ತ್ಯಜಿಸು. ಇರಿಯುವ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯಿತಿ, ಬಿಬಿಎಂಪಿಗಳಲ್ಲಿ ಕಮಲ ಅರಳಿಸುವ ಅಪ್ಪರ್‍ಕ್ರಿಯೆ ಮಾಡು’ ಎಂದು ತಾಕೀತು ಮಾಡಿತು.

ನೀತಿ: ಎಲ್ಲವೂ ನೀವು ಹೇಳಿದಂತೆ ನಡೆಯದು. ಬಣಕ್ಕೆ ಕಡಿವಾಣ ಇರಲಿ. ದುಡಿದವರನ್ನು ದೂಡಬೇಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.