ಸೋಮವಾರ, ಡಿಸೆಂಬರ್ 5, 2022
21 °C

ಚುರುಮುರಿ: ದೇವರ ಚಿತ್ತ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಮಾನವೀಯತೆ ಅನ್ನೋದು ಮರೆಯಾಗ್ತಿದೆ, ತುರ್ತು ಪರಿಸ್ಥಿತೀಲಿ ಚಿಕಿತ್ಸೆ ಕೊಡೋಕ್ಕೂ ನಿಯಮಾವಳಿ ನೋಡ್ತಾ ಕೂತ್ರೆ ಪ್ರಾಣ ಉಳಿಯುತ್ಯೆ? ಮೊನ್ನೆ ಸೇತುವೆ ಮುರಿದು ಒಂದಷ್ಟು ಬಲಿ- ಎಲ್ಲಕ್ಕೂ ದೇವರ ಚಿತ್ತ ಅನ್ನೋಕೆ ಬರೋಲ್ಲ’ ಅತ್ತೆ ಕಿಡಿಕಾರಿದರು.

ವಾಕ್ ಮುಗಿಸಿ ಬಂದ ಕಂಠಿ, ನೇರ ಆರಾಮ ಕುರ್ಚಿಯಲ್ಲಿ ಕುಳಿತು ‘ನಿನ್ನೆ ಬ್ಯಾಂಕಿಗೆ ಹೋಗಿದ್ದೆ. ಕನ್ನಡ ಕಳೆದುಹೋಗಿದೆ, ಜಾಲರಿ ಹಾಕಿ ಹುಡುಕಬೇಕು. ನಮ್ಮ ಧಾರಾಳತನ ಅತಿಯಾಯ್ತೆನೋ. ಕೊನೇಪಕ್ಷ ಭಾಷೆ ವಿಷಯದಲ್ಲಿ ಸ್ವಲ್ಪ ಕಠಿಣವಾಗಿರಬೇಕು’ ತಲೆ ಕೆರೆದುಕೊಂಡ.

‘ಕನ್ನಡ ಕಲಿಯೋದು ಅಂದ್ರೆ ಕಹಿ ಕಷಾಯ ಕುಡಿಯೋದು ಅನ್ನೋ ಹಾಗೆ ಆಡ್ತಾನೆ! ಹತ್ತು ವರ್ಷದಿಂದ ಇಲ್ಲೇ ಇದ್ದಾರೆ ಕನ್ನಡದಲ್ಲಿ ಮಾತಾಡೋಕ್ಕೆ ಬರೋಲ್ಲ. ಕನ್ನಡ ವಿಷಯದಲ್ಲಿ ವೀಕು, ಪರೀಕ್ಷೇಲಿ ಎರಡಂಕ ದಾಟಿಲ್ಲ’ ಅತ್ತೆಯಿಂದ ತಮ್ಮ ಹೊಸ ಸ್ಟೂಡೆಂಟಿನ ಗುಣಗಾನ.

‘ನೀವೂ ಸರಿ, ಮೊನ್ನೆ ಪಕ್ಕದ್ಮನೆ ಪಂಕಜನ ಮೊಮ್ಮೊಗನಿಗೆ ತರಕಾರಿ ಹೆಸರು ಇಂಗ್ಲಿಷ್‌ನಲ್ಲಿ ಕೇಳಿ, ಕನ್ನಡದಲ್ಲಿ ಗುರುತಿಸೋಕ್ಕೆ ಹೇಳ್ತಿದ್ದೆ. ಡ್ರಮ್ ಸ್ಟಿಕ್ ಅಂದರೆ ತಮಟೆ ಕಡ್ಡಿ ಅನ್ಬೇಕೆ? ಡ್ರಮ್ ಅಂದ್ರೆ ತಮಟೆ, ಸ್ಟಿಕ್ ಅಂದ್ರೆ ಕಡ್ಡಿ ಅನ್ನೋ ಸಮರ್ಥನೆ ಬೇರೆ!’ ನುಗ್ಗೆಕಾಯಿಗೆ ಬಂದ ಗತಿ ನೋಡಿ ನನ್ನವಳ ಒಗ್ಗರಣೆ.

‘ಅಯ್ಯೋ ಅದು ವಾಸಿ, ನಮ್ಮ ಪುಟ್ಟಿಯ ಹೊಸ ಗೆಳತಿ ಮನೆಗೆ ಬಂದಾಗ ಅವಳ ಭಾಷೆ ಗಮನಿಸಿ ‘ನೀವು ಉತ್ತರ ಕರ್ನಾಟಕದವರೇ?’ ಅಂತ ಕೇಳಿದ್ದಕ್ಕೆ ‘ಅಲ್ಲ ನಾರ್ತ್ ಕರ್ನಾಟಕ’ ಅಂದ್ಳು. ಕಪಾಳಮೋಕ್ಷ ಆದಂತಾಯ್ತು’ ನನ್ನ ಪಾಲೂ ಸೇರಿಸಿದೆ.

‘ಅರೆ ಬಂದ ವಿಷಯ ಹೇಳೋಕ್ಕೆ ಮರೆತೆ. ನಮ್ಮ ಆಫೀಸಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ, ಪಾಠ ಹೇಳ್ಕೊಡೋಕ್ಕೆ ನಿಮ್ಮತ್ತೆಯವರ ಹೆಸರು ಅಂತಿಮಗೊಳಿಸಲಾಗಿದೆ’ ಎಂದು ಆಹ್ವಾನಪತ್ರ ಕೊಟ್ಟ.

‘ಪಿಕಪ್– ಡ್ರಾಪ್ ವಿತ್ ಗೌರವಧನ, ಅಜ್ಜೀ, ಹೊಡೆದೆ ಚಾನ್ಸು’ ಪತ್ರದ ಮೇಲೆ ಕಣ್ಣಾಡಿಸಿದ ಪುಟ್ಟಿ ಕೇಕೆ ಹಾಕಿದಳು.

‘ಇದನ್ನೇ ದೇವರ ಚಿತ್ತ ಅನ್ನೋದು’ ಎನ್ನುತ್ತಾ ನನ್ನವಳು ಹೊಗೆಯಾಡುವ ಕಾಫಿ ತಂದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.