ಸೋಮವಾರ, ಮಾರ್ಚ್ 27, 2023
33 °C

ಚುರುಮುರಿ | ಅನಿರೀಕ್ಷಿತ ಅದೃಷ್ಟ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

‘ಇದಕ್ಕಿಂತ ದೀಪಾವಳಿ ಉಡುಗೊರೆ ಬೇಕೆ? ಅಬ್ಬಾ! ಪಂದ್ಯದ ಕೊನೆಯ ಓವರ್ ಅದೆಷ್ಟು ರೋಚಕವಾಗಿತ್ತು!’ ನೇರ ಪ್ರಸಾರದಲ್ಲಿ ನೋಡಿದ್ದರೂ, ಪೇಪರಿನಲ್ಲಿ ಕ್ರಿಕೆಟ್ ಸುದ್ದಿ ಓದುವಾಗ ಮತ್ತೆ ಮೆಲುಕಿದ್ದೆ.

‘ಹೌದಪ್ಪಾ, ಗೆಲುವು ದೂರದ ಮಾತು ಅನ್ನೋವಾಗ ಕೊಹ್ಲಿ, ಪಾಂಡ್ಯ ಜೋಡಿಯಾಟ ವಿರಾಟ್ ದರ್ಶನ ಅನ್ನೋ ಹಾಗಿತ್ತು’ ಪುಟ್ಟಿಯ ಹಾರ್ದಿಕ ಮೆಚ್ಚುಗೆ.

‘ಕೊನೆಯ ಓವರಿನ ವೈಡ್, ಫ್ರೀ ಹಿಟ್ ನಮ್ಮ ಪಾಲಿಗೆ ವರವಾಗಿ ಬಂತು’ ಎಂದೆ.

‘ಫ್ರೀ ಹಿಟ್ ಅಂದ್ರೇನು? ಪುಕ್ಕಟೆ ಹೊಡೆಯೋದಾ?’ ಅತ್ತೆಯ ಕುತೂಹಲ.

‘ಒಂದು ರೀತಿ ಅನಿರೀಕ್ಷಿತ ಅದೃಷ್ಟ ಅಜ್ಜಿ, ನೋ ಬಾಲ್ ನಂತರದ ಎಸೆತ ಫ್ರೀ ಹಿಟ್. ಈ ಎಸೆತದಲ್ಲಿ ಬ್ಯಾಟ್ಸ್‌ಮನ್ ಔಟ್ ಆಗುವ ಭಯವಿಲ್ಲದೆ ರಿಸ್ಕ್ ತಗೊಂಡು ಚಚ್ಚಬಹುದು. ಬೌಲರ್‌ಗೆ ಇದು ದಂಡ, ಅದೇ ದಾಂಡಿಗರಿಗೆ ಉಪಕಾರ. ರನ್‌ಔಟ್ ಆಗದಂತೆ ಜಾಗ್ರತೆ ವಹಿಸಬೇಕು, ಅಷ್ಟೇ’ ಎನ್ನುತ್ತಾ ಪಟಾಕಿ ಗನ್‌ನಲ್ಲಿ ಢಂಢಂ ಅನ್ನಿಸಿ ಸಂಭ್ರಮಿಸಿದಳು.

‘ಅದೃಷ್ಟ ಕೈ ಹಿಡಿದರೆ ಎಲ್ಲವೂ ನಮಗೆ ಸಾಧಕ ಅಲ್ವೇ, ಅವಕಾಶ ಕೈ ತಪ್ಪಿತು ಅನ್ನೋ ಹೊತ್ತಿಗೆ ಹೇಗೋ ಕೈ ಸೇರುತ್ತೆ?’ ಅತ್ತೆಗೆ ಅರ್ಥವಾಗಿತ್ತು.

‘ಹ್ಞೂಂ ಮತ್ತೆ, ಈಗ ನಮ್ಮ ರಿಷಿ ಸುನಕ್ ವಿಷಯದಲ್ಲೂ ಹಾಗೇ... ಮೊದಲಿಗೆ ತಪ್ಪಿದರೂ ಎರಡನೇ ಅವಕಾಶದಲ್ಲಿ ಪ್ರಧಾನಿ ಗದ್ದುಗೆ ಒಲಿಯಿತಲ್ಲ’ ನನ್ನವಳ ಸುದ್ದಿಸಾರ.

ಅಷ್ಟರಲ್ಲೇ ಕಂಠಿಯ ದರ್ಶನ...
‘ನಮ್ಮ ಬಡಾವಣೇಲಿ ಹೊಸ ರೇಷ್ಮೆ ಸೀರೆ ಅಂಗಡಿ ಪ್ರಾರಂಭೋತ್ಸವ. ಒಂದು ಸೀರೆಗೆ ಇನ್ನೊಂದು ಸೀರೆ ಫ್ರೀ, ಶ್ರೀಮತಿ ಇನ್ನೊಂದರ್ಧ ಗಂಟೇಲಿ ಹೊರಡ್ತಾಳೆ. ನಿಮಗೂ ಒಂದ್ಮಾತು ಹೇಳೋಕ್ಕೆ ಹೇಳಿದಳು’ ಎಂದು ಆಟಂಬಾಂಬ್ ಸಿಡಿಸಿದ.

‘ಅನಿರೀಕ್ಷಿತ ಅದೃಷ್ಟ ಅಂದರೆ ಇದು! ಅವಕಾಶ ಬಿಡಬಾರದು’ ಅತ್ತೆ ಕಣ್ಣರಳಿಸಿದರು.

ನನ್ನ ಸ್ಥಿತಿ ಠುಸ್ ಪಟಾಕಿಯಾಗಿದ್ದರೆ, ಹೂಕುಂಡದ ಬೆಳಕು ಮಿಣುಕೆಲ್ಲ ನನ್ನವಳ ಮೊಗದಲ್ಲಿ ಪ್ರತಿಫಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.