ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಕ್ಕಣ್ಣನ ಟೆಕ್ ಸಮ್ಮಿಟ್

Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಕ್ಕಣ್ಣ ‘ನಾ ಟೆಕ್ ಸಮ್ಮಿಟ್‌ಗೆ ಹೋಗತೀನಿ. ಅಶ್ವಥಂಕಲ್ಲಿನ ಹಂಗೆ ನಾನೂ ಸೂಟು, ಬೂಟು, ಕೋಟು ಹಾಕ್ಕಂಡು ಹೋಗತೀನಿ, ನನಗೂ ಕೊಡಿಸು’ ಎಂದು ವಾರದಿಂದ ವರಾತ ಹಚ್ಚಿತ್ತು.

‘ನೋಡಾಕೆ ಹೋಗವ್ರೆಲ್ಲ ಸೂಟು ಬೂಟು ಕೋಟು ಹಾಕ್ಕಂಡು ಹೋಗತಾರೇನು’ ಎಂದು ಬೈದೆ.

‘ನೋಡಾಕಲ್ಲ, ನಾನೇ ಕಂಡುಹಿಡಿದ ನಾಕಾರು ತಂತ್ರಜ್ಞಾನ ಪ್ರದರ್ಶನ ಮಾಡಾಕೆ ಹೊಂಟೀನಿ. ಇದು ನೋಡು... ಹೆಗ್ಗಣ ಹಿಡಿಯಾಕೆ ರೊಬಾಟ್. ನನ್ನ ಹಂಗೇ ಮ್ಯಾಂವ್ ಅಂತದ. ಹೆಗ್ಗಣ ಹಿಡಿದು ನಿಮ್ಮ ಕೈಯಾಗೆ ತಂದು ಇಡತೈತಿ. ಇದು ಇನ್‍ಸ್ಟಂಟ್ ರಸ್ತೆಗುಂಡಿ ಮುಚ್ಚೂ ಯಂತ್ರ. ಗುಂಡಿ ಎಲ್ಲಿ ಬಿದ್ದೈತಿ, ಆಳ ಎಷ್ಟೈತಿ ಅಂತ ಯಂತ್ರಕ್ಕೆ ಮಾಹಿತಿ ಫೀಡ್ ಮಾಡಿದರೆ, ಇದೇ ಹೋಗಿ ಐದೇ ನಿಮಿಷದಾಗೆ ಗುಂಡಿ ಮುಚ್ಚತೈತಿ. ಮತ್ತ ಇದೊಂದು ಭಾರೀ ಸ್ಪೆಶಲ್ ಯಂತ್ರ. ಮೋದಿ ಮಾಮ ಇಲ್ಲೀವರೆಗೆ ಯಾವ್ಯಾವ ಥರದ ರುಮಾಲು ಕಟ್ಯಾನ, ಟೋಪಿ ಹಾಕ್ಯಾನ ಅನ್ನೂದೆಲ್ಲ ಇದ್ರಾಗೆ ಫೀಡ್ ಆಗೈತಿ. ಇನ್ನು ಮುಂದೆ ಯಾವ ಕಾರ್ಯಕ್ರಮಕ್ಕೆ ಯಾವ ಥರದ ರುಮಾಲು ಕಟ್ಟಬೇಕು ಅಥವಾ ಟೋಪಿ ಹಾಕಬೇಕು ಅಂತ ಇದು ತೋರಿಸಿ, 3ಡಿ ಟೆಕ್ನಾಲಜಿವಳಗ ಅದನ್ನು ತಯಾರು ಮಾಡಿಕೊಡತೈತಿ’.

ಬೆಕ್ಕಣ್ಣ ಅಂತೂ ಬಾಡಿಗೆಗೆ ಸೂಟು, ಬೂಟು, ಕೋಟು ತೆಗೆದುಕೊಂಡು, ಲ್ಯಾಪ್‍ಟಾಪ್ ಚೀಲ ಬೆನ್ನಿಗೇರಿಸಿಕೊಂಡು, ಬೈಕ್ ಏರಿ ಹೊರಟೇಬಿಟ್ಟಿತು. ಅರ್ಧಗಂಟೆಯಲ್ಲೇ
ಹ್ಯಾಪು ಮೋರೆ ಹಾಕಿಕೊಂಡು ವಾಪಸು ಬಂದಿತು.

‘ಏನಲೇ... ಸೂಟು, ಬೂಟು, ಕೋಟು ಮಣ್ಣಾಗೈತಿ, ಎಲ್ಲಾರ ರಸ್ತೆಗುಂಡಿಗೆ ಬಿದ್ಯೇನು?’ ಗಾಬರಿಯಿಂದ ಕೇಳಿದೆ.

‘ಬೆಂಗಳೂರು ಮಹಾಲಕ್ಷ್ಮಿ ನಗರಿಯಾಗಲೀ ಟೆಕ್ ನಗರಿಯಾಗಲೀ ಏನೇ ಆಗಲಿ, ಗುಂಡಿಗಳು ಶಾಶ್ವತ. ಗುಂಡಿ ಮುಚ್ಚೂ ಯಂತ್ರ ಕಂಡ್ ಹಿಡಿಲಾಕೆ ನೀ ಯಾಂವನಲೇ ಅಂತ ಬಿಬಿಎಂಪಿ ಮಂದಿ, ಗುತ್ತಿಗೇದಾರ್‍ರು ಎಲ್ಲ ಸೇರಿ ನನ್ನ ಗುಂಡಿಗೆ ದಬ್ಬಿದ್ರು’ ಎಂದು ಅಳುಮುಖ ಮಾಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT