‘ನಮಸ್ಕಾರ ಮೇಡಂ’.
‘ನಮಸ್ಕಾರ, ಹೇಳಿ’.
‘ನನಗೆ ಅರ್ಜೆಂಟಾಗಿ ಒಂದು ಟಿಕೆಟ್, ಸೀಟು ಬೇಕಾಗಿತ್ರ! ಯಾರು ಕೇಳಿದ್ರೂ ಆಗಕುಲ್ಲ ಅಂತರೆ’.
‘ಕೊಡಸನೇಳಿ. ಮೆಡಿಕಲ್ ಸೀಟಾ, ಎಂಜಿನೀರಿಂಗ್ ಸೀಟಾ?’
‘ಮೇಡಂ ಎಂಜಿನೀರಿಂಗು, ಮೆಡಿಕಲ್ ಸೀಟು ತಕ್ಕೋಕೆ ನಾನು ಮುದುಕ, ನನ್ನ ಮಗ ಚಿಕ್ಕುಡುಗ. ಅವುಕ್ಕೆಲ್ಲಾ ನಂತಾವ ಕ್ಯಾಸಿಲ್ಲ ಬುಡಿ’.
‘ನಗದಿದ್ರೇ ಕೆಲಸಾಗದು ಕಂಡ್ರಿ’.
‘ಅಯ್ಯೋ ಈ ಬೆಲೆ ಏರಿಕೆ ಕಾಲದೇಲಿ ನಗದೆಲ್ಲಿ ಬಂತು ಮೇಡಂ. ಹಬ್ಬಕ್ಕೇ ಕಾಸಿಲ್ದೆ ಅಳುವಂಗಾಗ್ಯದೆ. ಒಂದೇ ಒಂದು ಟಿಕೆಟ್ ಕೊಡ್ಸಿ, ನಿಮ್ಮ ದಮ್ಮಯ್ಯ’.
‘ನೋಡ್ರಿ ಒಂದೇಳ್ತೀನಿ ಕೇಳಿ. ನಿಮಗೆ ಟಿಕೇಟು ಸಿಕ್ಕಿದ ಮ್ಯಾಲೆ ನಮ್ಮನ್ನ ಮೂಸಿ ಕೂಡ ನೋಡಕುಲ್ಲ. ಆಗ ನಾವು ಯಾರೋ ನೀವು ಯಾರೋ. ನಮ್ಮನ್ನ ನಂಬಿ ಕಾಸು ಕೊಡಿ’.
‘ಕೊಡನೇಳಿ. ಟಿಕೆಟ್ ಯಾವಾಗ ಕೊಟ್ಟೀರಿ?’
‘ನೋಡಿ, ದುಡ್ಡು ಸ್ಯಾನೆ ಜನಕ್ಕೆ ಹಂಚಬೇಕಾಯ್ತದೆ. ನೀವು ಕೊಟ್ಟ ಕಾಸು ಎಲ್ಲೆಲ್ಲಿಗೋ ಹರಿದು ಹೊಂಟೋಯ್ತದೆ’.
‘ಕಾಸೇನು ಕಾವೇರಿ ನೀರಾ ಮೇಡಂ ಕೇಳಿದಂಗೆಲ್ಲ ಹರಿಸಕ್ಕೆ. ಸ್ವಲ್ಪ ಕಮ್ಮಿ ಮಾಡಿಕಳಿ’.
‘ಇದರಗೆ ನಮಗೇನೂ ಗಿಟ್ಟಕುಲ್ಲ ಕಂಡ್ರಿ. ನಾವು ಏನಾದರೂ ಮಾಡಿಕ್ಯಬಕಲ್ಲವಾ! ಒಂದತ್ತು ಕೋಟಿ ವಗಾಯ್ಸಿ. ಎಲ್ಲಿಗೆ ಬೇಕಾದ್ರೂ ಟಿಕೆಟ್ ಕೊಡಿಸಮು’.
‘ಏನು ಮೇಡಂ ಕೋಟಿ ಅಂತೀರ, ನಗ್ಸಾರ ಮಾಡ್ತಿದ್ದರಿಯಾ?’
‘ತಮಾಸೆ ಸುರು ಮಾಡಿದ್ದು ನೀವು. ನಿಮಗೆ ಚಂದ್ರಲೋಕಕ್ಕಾ, ಮಂಗಳ ಲೋಕಕ್ಕಾ ಟಿಕೆಟ್ಟು ಬೇಕಾಗಿರದು. ಬೇಗನೇಳಿ, ಕೆಲಸ ಜಾಸ್ತಿಯಾಗಿ ಕುಸಿದು ಬೀಳಂಗಾಯ್ತಾದೆ’.
‘ಅಯ್ಯೋ ನಿಮ್ಮ, ಇದು ಕೆಎಸ್‌ಆರ್‌ಟಿಸಿ ಟಿಕೆಟ್ ಬುಕಿಂಗ್ ಆಪೀಸಲ್ಲವುರಾ. ನಾನು ಗಣೇಸನ ಹಬ್ಬಕ್ಕೆ ಊರಿಗೆ ಹೋಗಬಕು ಮೇಡಂ. ಯಾವ ಬಸ್ಸಿಗೂ ಟಿಕೇಟೇ ಸಿಕ್ತಿಲ್ಲ. ನೀವೇನನ್ನ ದೊಡ್ಡ ಮನಸ್ಸು ಮಾಡಿ ನಮ್ಮೂರು ಬಸ್ಸಿಗೆ ಒಂದು ಟಿಕೆಟ್, ಒಂದು ಸೀಟು ಮಾಡಿಕೊಟ್ಟರೆ ಊರಿಗೋಗಿ ಕಡುಬು ತಿನ್ಕಂದು ಬತ್ತೀನಿ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.