ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಮೋಡಿ ಚಿಕಿತ್ಸೆ!

ಚುರುಮುರಿ: ಮೋಡಿ ಚಿಕಿತ್ಸೆ!
Published 11 ಜನವರಿ 2024, 19:35 IST
Last Updated 11 ಜನವರಿ 2024, 19:35 IST
ಅಕ್ಷರ ಗಾತ್ರ

‘ಡಾಕ್ಟ್ರು ಬರೆದುಕೊಟ್ಟಿದ್ದ ಮೆಡಿಕಲ್ ರಿಪೋರ್ಟ್ ಓದೋಕಾಗದೆ ಕೋರ್ಟ್ ಜಡ್ಜ್ ಒಬ್ರು ‘ನೆಟ್ಟಗೆ ಅರ್ಥ ಆಗಂಗೆ ಬರೀರಿ’ ಅಂತ ಆ ಡಾಕ್ಟ್ರ ಮೇಲೆ ಸಿಟ್ಟಿಗೆದ್ದಿದ್ರಂತಪ...’ ದುಬ್ಬೀರ ಪೇಪರ್‌ನಲ್ಲಿ ಬಂದಿದ್ದ ಸುದ್ದಿ ತೋರ್ಸಿ ನಕ್ಕ.

‘ಈ ಡಾಕ್ಟ್ರುಗಳ ಅಕ್ಷರ ಮೆಡಿಕಲ್ ಶಾಪ್‌ನೋರಿಗೆ ಬಿಟ್ರೆ ಹರಿ ಬ್ರಹ್ಮಂಗೂ ಅರ್ಥ ಆಗಲ್ಲ ಕಣಲೆ’ ಎಂದ ಗುಡ್ಡೆ.

‘ಯಾಕರ್ಥ ಆಗಲ್ಲ? ಅರ್ಥ ಆಗದೆ ಅವ್ರು ಪರೀಕ್ಷೇಲಿ ಬರೆದಿದ್ದನ್ನ ಓದಿ ಮಾರ್ಕ್ಸ್ ಕೊಟ್ಟಿರ್ತಾರಾ?’

‘ಗ್ಯಾರಂಟಿ ಅರ್ಥ ಆಗಿರಲ್ಲ, ಏನೋ ಪೇಪರ್ ತುಂಬಾ ಬರೆದಿದಾನೆ, ಹೋಗ್ಲಿ ಅಂತ ಮಾರ್ಕ್ಸ್ ಕೊಟ್ಟಿರ್ತಾರೆ ಅಷ್ಟೆ’.

‘ಲೇಯ್ ಗುಡ್ಡೆ, ಡಾಕ್ಟ್ರುಗಳು ಅಂದ್ರೆ ದೇವರಿದ್ದಂಗೆ. ಹತ್ತು ವರ್ಷ ಓದಿ ಬರ್ದೂ ಬರ್ದೂ ಅವರ ಕೈ ಅಕ್ಷರ ಹಂಗಾಗಿರ್ತಾದೆ ಅಷ್ಟೆ’ ತೆಪರೇಸಿ ರೇಗಿದ.

‘ಆತು ಬಿಡಪ, ತಪ್ಪಾತು. ಆದ್ರೆ ಮೊನ್ನಿ ಯಾರೋ ಡಾಕ್ಟ್ರು ಬರೆದುಕೊಟ್ಟಿದ್ದ ಒಂದು ಔಷಧಿ ಎಲ್ಲೂ ಸಿಗದೆ ವಾಪಸ್ ಅದೇ ಡಾಕ್ಟರಿಗೆ ಬಂದು ಕೇಳಿದಾಗ ‘ರೀ ಅದು ಔಷಧಿ ಅಲ್ಲ ಕಣ್ರಿ, ಹದಿನೈದು ದಿನ ಬಿಟ್ ಬನ್ನಿ ಅಂತ ಬರೆದಿದ್ದೆ ಅಂದ್ರಂತೆ, ಇದಕ್ಕೇನಂತೀಯ?’

‘ಅಯ್ಯೋ ಇಂಥವು ಬಾಳದಾವು. ಡಾಕ್ಟ್ರ ಔಷಧಿ ಚೀಟಿ ಓದಿ ಮೆಡಿಕಲ್ ಶಾಪ್‌ನೋನು ರೋಗಿಗೆ ಮಾತ್ರೆ ಕೊಟ್ಟಿದ್ನಂತೆ. ಅದನ್ನ ಒಂದು ವಾರ ತಗಂಡ ರೋಗಿ ಡಾಕ್ಟ್ರ ಹತ್ರ ಹೋಗಿ ‘ಸಾ, ಈ ಮಾತ್ರೆನ ಒಂದು ತಿಂಗ್ಳು ತಗಾಳಾಕೆ ಹೇಳಿದ್ರಲ್ಲ, ಒಂದು ವಾರಕ್ಕೇ ವಾಸಿಯಾತು’ ಅಂದ್ನಂತೆ. ಡಾಕ್ಟ್ರು ರೋಗಿ ಕೈಲಿದ್ದ ಮಾತ್ರೆ ನೋಡಿ ‘ಅಯ್ಯೋ, ನಾನು ಬರೆದಿದ್ದು ಇದಲ್ಲ ಕಣ್ರೀ’ ಅಂತ ಗಾಬರಿ ಆದ್ರಂತೆ. ಡಾಕ್ಟ್ರ ಮೋಡಿ ಅಕ್ಷರ ಅರ್ಥ ಆಗದೆ ಮೆಡಿಕಲ್ ಶಾಪ್‌ನೋನು ಇನ್ಯಾವುದೋ ಮಾತ್ರೆ ಕೊಟ್‌ಬಿಟ್ಟಿದ್ನಂತೆ!’ ದುಬ್ಬೀರ ನಕ್ಕ.

‘ಮೋಡಿ ಅಕ್ಷರ ಮಾಡಿದ ಈ ಪವಾಡಕ್ಕೆ ಮೋಡಿ ಚಿಕಿತ್ಸೆ ಅನ್ನಬೋದಾ?’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT