ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಒಂದು ಸಿನಿಕಥೆ..

ಚುರುಮುರಿ
Published 19 ಫೆಬ್ರುವರಿ 2024, 19:17 IST
Last Updated 19 ಫೆಬ್ರುವರಿ 2024, 19:17 IST
ಅಕ್ಷರ ಗಾತ್ರ

‘ಸಾ, ಈ ಮಲ್ಟಿ ಸ್ಟಾರ್ ಸಿನಿಮಾದಲ್ಲಿ ಸುಮಾರು ಜನ ಹೀರೊಗಳಿರತರೆ. ಓಪನಿಂಗ್ ಸೀನಲ್ಲಿ ಮೇನ್ ಹೀರೊ ಮೋನ ಕಮಲದ ಹೂವಿಡಕಂದು ಬರುವಾಗ ಯಕ್ಕಾಮಕ್ಕ ಸೌಂಡು ಎಫೆಕ್ಟಿರತದೆ. ಜನ ಅಲ್ಲಾಡಿ ಹೋಗಬಕು ಸಾ’ ಅಂದ್ರು ನಿರ್ಮಾಪಕರಿಗೆ ಸಿನಿಮಾ ಕತೆ ಹೇಳುತ್ತಿದ್ದ ಡೈರೆಕ್ಟರು.

‘ಆಯ್ತು ಕನ್ರೀ, ಮೇನ್ ಹೀರೊ ಏನು ಮಾಡ್ತರೆ?’ ನಿರ್ಮಾಪಕರು ಕೇಳಿದರು.

‘ಅವರು ‘ನಾನು ತಿನ್ನಲ್ಲ, ತಿನ್ನಕ್ಕೆ ಬುಡಲ್ಲ’ ಅಂತ ತಮ್ಮ ಸಿಗ್ನೇಚರ್ ಡೈಲಾಗಿನ ನುಡಿಮದ್ದು ಸಿಡಿಸ್ತರೆ. ಇವರ ಹಿಂಬಾಲಕರು ಅದುನ್ನೇ ರೀಲ್ಸ್ ಮಾಡಿಕ್ಯಂದು ‘ಮೋನ, ಮೋನ’ ಅಂತ ಕೂಗ್ತಾ ಟ್ರೆಂಡ್‌ಸೆಟ್ ಮಾಡ್ತರೆ’

‘ಎರಡನೇ ಹೀರೊ ರಾಗಾ ಕಥೆ?’

‘ಸಾ, ಅವರ ಡೈಲಾಗ್ ಡೆಲಿವರಿಯನ್ನ ಡಬ್ಬಿಂಗಲ್ಲಿ ಅಡ್ಜಸ್ಟ್ ಮಾಡಿಕ್ಯಬಕು. ಈಗ ಅವರು ಇಂಡಿಯಾ ಜೋಡಿಸೊ ಯಾತ್ರೆ ಮಾಡಿಕ್ಯಂದು ಮಕ್ಕಳಿಗೆ ತಲೆ ಸವುರದು, ಅಜ್ಜಿದೀರಿಗೆ ಕಾಲಿಗೆ ಬೀಳದ್ರಲ್ಲಿ ಬಿಜಿಯಾಗ್ಯವುರೆ. ಇವರ ಹಿಂಬಾಲಕರು ಹೇಳಿದ ಮಾತು ಕೇಳದಿದ್ರೂ ‘ನಮ್ಮದೇ ಗ್ಯಾರಂಟಿ-ಗ್ಯಾರಂಟಿ’ ಅಂತ ಹಾಡು ಪ್ರಾಕ್ಟೀಸ್ ಮಾಡ್ತಾವ್ರೆ’

‘ಉಳಿದೋರ ಕಥೆ ಹ್ಯಂಗೆ ಡೈರೆಕ್ಟರೆ?’

‘ಬಂಗಾಳದ ಅಕ್ಕೋರು ಅವರೇ ಡೈಲಾಗು ಬರಕಬಂದು ಅವರೇ ಡೈರೆಕ್ಷನ್ ಮಾಡಿಕ್ಯತರಂತೆ. ಆನೆ, ಸೈಕಲ್ಲು, ಮಚ್ಚು-ಸುತ್ತಿಗೆ, ಪೊರಕೆ ಹಿಡಿದೋರೂ ಅವ್ರೆ’ ನಿರ್ದೇಶಕರು
ನಿಟ್ಟುಸಿರುಬಿಟ್ಟರು.

‘ಸಿನಿಮಾಕ್ಕೆ ದುಡ್ಡು-ಕಾಸು ಹ್ಯಂಗೆ?’ ನಿರ್ಮಾಪಕರು ಡೌಟಲ್ಲಿ ಕೇಳಿದರು.

‘ನೀವೇನು ಯದಾರಾಗಬ್ಯಾಡಿ ಸಾ. ದೊಡ್ಡ ದೊಡ್ಡ ಯಾಪಾರಸ್ಥರು ಬಾಂಡು ತಗಂಡು ದುಡ್ಡು ಕೊಟ್ಟೊಯ್ತರೆ’.

‘ಸರಿ ಕನ್ರೀ, ಥಿಯೇಟರ್ ಸಿಗಬೇಕಲ್ಲಪ್ಪ ನಮಗೆ...’

‘ಸಾ, ನೀವೇನು ತಲೆ ಕೆಡಿಸಿಗ್ಯಬೇಡಿ. ಮೇನ್ ಹೀರೊ ಮೋನ ಐದೊರ್ಸಕ್ಕೆ ಥಿಯೇಟರ್ ಬುಕ್ ಮಾಡಿಕ್ಯತಾವ್ರೆ. ಆದರೆ ಸಿನಿಮಾದಲ್ಲಿ ಅವರ ರೀಲ್ಸ್ ಮಾತ್ರ ತೋರಿಸಬೇಕಂತೆ!’ ನಿರ್ದೇಶಕರ ಮಾತಿಗೆ ಸ್ಮೃತಿ ತಪ್ಪಿ ಬಿದ್ದರು ನಿರ್ಮಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT