ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಏನಿಲ್ಲ... ಏನಿಲ್ಲ

ಚುರುಮುರಿ: ಏನಿಲ್ಲ... ಏನಿಲ್ಲ
Published 22 ಫೆಬ್ರುವರಿ 2024, 19:47 IST
Last Updated 22 ಫೆಬ್ರುವರಿ 2024, 19:47 IST
ಅಕ್ಷರ ಗಾತ್ರ

‘ಏನೋ ಗುಡ್ಡೆ, ಗಡ್ಡ ಬಿಟ್ಟಿದೀಯ, ಏನ್ಸಮಾಚಾರ?’ ದುಬ್ಬೀರ ನಗುತ್ತ ಕೇಳಿದ.

‘ಏನಿಲ್ಲ ಕಣಲೆ... ಸುಮ್ನೆ, ಏನಿಲ್ಲ’ ಎಂದ ಗುಡ್ಡೆ.

‘ಲೇಯ್, ಏನಿಲ್ಲ ಏನಿಲ್ಲ ಅನ್ನಾಕೆ ಇದು ಅಸೆಂಬ್ಲಿ ಅಲ್ಲ, ಹರಟೆಕಟ್ಟೆ. ಸರಿಯಾಗಿ ಮಾತಾಡು...’

‘ಅಲೆ ಇವ್ನ, ನಾನು ಸರಿಯಾಗೇ ಮಾತಾಡ್ತಿರಾದು. ಅಸೆಂಬ್ಲಿ ಆಗಿದ್ರೆ ಬಾಯಿಗೆ ಬಂದಂಗೆ ಮಾತಾಡ್ತಿದ್ದೆ’ ಗುಡ್ಡೆಗೆ ಸಿಟ್ಟು ಬಂತು.

‘ಅಂದ್ರೆ ಅಸೆಂಬ್ಲೀಲಿ ಏನು ಬೇಕಾದ್ರು ಮಾತಾಡ್ಬೋದಾ?’ ತೆಪರೇಸಿ ಪ್ರಶ್ನೆ.

‘ಏನೋಪ್ಪ, ಅಸೆಂಬ್ಲೀಲಿ ಯಕ್ಕಾಮಕ್ಕಾ ಬೈದಾಡ್ತಾರೆ, ಹೊರಗೆ ಹೆಗಲ ಮೇಲೆ ಕೈ ಹಾಕ್ಕಂಡು ನಗ್ತಾ ನಗ್ತಾ ಓಡಾಡ್ತಾರೆ. ಕೇಳಿದ್ರೆ ಏನಿಲ್ಲ ಏನಿಲ್ಲ ಅಂತಾರೆ...’ ಕೊಟ್ರ ನಕ್ಕ.

‘ಲೇಯ್ ರಾಜಕೀಯ ಅಂದ್ರೆ ಹಂಗೇ... ರಾತ್ರೋರಾತ್ರಿ ಬೇರೆ ಪಕ್ಷದೋರ ಜತಿಗೆ ಡೆಲ್ಲಿಗೆ ಹಾರ್ತಾರೆ, ಕೇಳಿದ್ರೆ ಕಾಫಿ ಕುಡಿಯಾಕೋಗಿದ್ವಿ ಅಂತಾರೆ... ಬೇರೆ ಪಕ್ಷದೋರ ಜತಿ ಮೀಟಿಂಗ್ ಮಾಡ್ತಾರೆ, ಕೇಳಿದ್ರೆ ಏನಿಲ್ಲ, ಉಣ್ಣಾಕೆ ಕರೆದಿದ್ರು ಹೋಗಿದ್ವಿ ಅಂತಾರೆ... ಟೀವಿಯೋರು ಬಾಯಿ ಬಿಡಿಸೋಕೆ ತಿಪ್ಪರಲಾಗ ಹಾಕಿದ್ರೂ ಒಂದೇ ಮಾತು... ಏನಿಲ್ಲ, ಏನಿಲ್ಲ...’ ದುಬ್ಬೀರ ಅನುಭವದ ಮಾತಾಡಿದ‌.

‘ಈ ರಾಜಕಾರಣಿಗಳು ಎಲ್ಲಿ ಏನಿಲ್ಲ ಅಂತಾರೋ ಅಲ್ಲಿ ಏನೋ ಐತಿ ಅಂತ ಅರ್ಥ...’ ಮಂಜಮ್ಮ ನಕ್ಕಳು.

‘ಏನಿಲ್ಲ ಏನಿಲ್ಲ ಅಂತ ಯಾರಾದ್ರೂ ಅನ್ಲಿ, ನಿಮ್ ಹೆಂಡ್ತಿದೀರು ಮಾತ್ರ ‘ಏನಿಲ್ಲ, ಏನಿಲ್ಲ... ಕರಿಮಣಿ ಮಾಲೀಕ ನೀನಲ್ಲ’ ಅಂತ ಅನ್ನದಂಗೆ ನೋಡ್ಕಳಿ ಸಾಕು’ ಕೊಟ್ರ ಕಿಸಕ್ಕೆಂದ.

‘ಲೇ ತಗಡು, ಅವರು ಯಾಕೆ ಹಂಗಂತಾರಲೆ, ಸುಮ್ನೆ ಗುಮ್ಮಿಸ್ಕಾಬೇಡ ನನ್ನತ್ರ...’ ತೆಪರೇಸಿ ರಾಂಗಾದ.

‘ಏನು? ನನ್ನೇ ತಗಡು ಅಂತೀಯ, ಯಾಕಲೆ?’ ಕೊಟ್ರನೂ ಸಿಟ್ಟಿಗೆದ್ದ.

‘ತಕ್ಷಣ ಮಧ್ಯಪ್ರವೇಶಿಸಿದ ದುಬ್ಬೀರ ‘ಏಯ್, ಶಾಂತಿ ಶಾಂತಿ... ತಗಡು ಅಂದ್ರೆ ಚಿನ್ನದ್ದು ಕಣಲೆ, ಅದಕ್ಯಾಕ್ ಸಿಟ್ ಮಾಡ್ಕಂತಿ’ ಅಂದ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT