ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಯಾಪಿ ಬರ್ತ್ ಡೇ!

Last Updated 4 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

‘ಯಾಪಿ ಬರ್ತ್‌ ಡೇ, ಯಾಪಿ ಬರ್ತ್ ಡೇ...’ ಮಡದಿಗೆ ವಿಶ್ ಮಾಡಿದೆ.

‘ಬರೀ ವಿಶ್‌ನಲ್ಲೇ ಮುಗಿಸೋದ್‌ ಬೇಡ. ನನ್ನ ಬರ್ತ್‌ಡೇನೂ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಲೇಬೇಕ್’ ಪಟ್ಟು ಹಿಡಿದ್ಲು ಪತ್ನಿ.

‘ನಿನಗೇನಾಯ್ತೆ, ಯಾವತ್ತೂ ಜೋರಾಗಿ ಬರ್ತ್‌ಡೇ ಮಾಡ್ಕೊಂಡವಳಲ್ಲ, ಈಗ್ಯಾಕಿಷ್ಟು ಹಟ?’

‘ನಾನು ಕೆಲವರಿಗೆ ಕೆಲವು ಮೆಸೇಜ್ ಪಾಸ್ ಮಾಡಬೇಕು ಅದಕ್ಕೆ. ಅದರಲ್ಲೂ ಎದುರು ಮನೆ ಕಮಲಂಗೆ ನನ್ನ ಪವರ್ ಏನು ಅಂತಾ ತೋರಿಸಬೇಕಿದೆ...’

ಕಮಲಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋ ಹಾಗೆ ಬರ್ತ್‌ಡೇ ಮಾಡಿದ್ದಾಯ್ತು. ಎಲ್ಲರಿಗಿಂತ ಜಾಸ್ತಿ ನನ್ನ ತಮ್ಮನ ಹೆಂಡ್ತಿ, ಅಂದ್ರೆ ಅವಳ ಓರಗಿತ್ತಿ ಜೊತೆಗೂ ಸಿಕ್ಕಾಪಟ್ಟೆ ಫೋಟೊ ತೆಗೆಸಿಕೊಂಡಳು ಮಡದಿ.

ಒಳಗೊಳಗೇ ಅಸಮಾಧಾನ, ಹೊಟ್ಟೆಕಿಚ್ಚು, ಸಿಟ್ಟು ಬರ್ತಿದ್ರೂ ಅದನ್ನ ತೋರಗೊಡದೇ ಫೋಟೊಗೆ ಪೋಸ್ ಕೊಡ್ತಿದ್ಲು ಓರಗಿತ್ತಿ.

‘ರೀ ಫಂಕ್ಷನ್‌ನಲ್ಲಿ ಓರಗಿತ್ತಿ ಮುಖ ನೋಡಿದ್ರಾ..’ ವ್ಯಂಗ್ಯಭರಿತ ಹೆಮ್ಮೆಯಲ್ಲಿ ಕೇಳಿದಳು ಹೆಂಡ್ತಿ.

‘ನೋಡಿದ್ನಲ್ಲ, ತುಂಬಾ ಚೆನ್ನಾಗಿದೆ’

‘ಹಾಗಲ್ಲ ರೀ, ಮುಂದಿನ ಸತ್ಯನಾರಾಯಣ ಸ್ವಾಮಿ ಪೂಜೆಗೆ ನಮಗಿಂತ ಅವಳೇ ತನ್ನ ಗಂಡನ ಜೊತೆ ಮುಂದಿನ ಸಾಲಿನಲ್ಲಿಯೇ ಕೂತ್ಕೊಬೇಕು ಅಂದ್ಕೊಂಡಿದ್ಲು. ಆದರೆ, ಈ ಮನೆಗೆ ಮುಂದಿನ ಯಜಮಾನಿ ನಾನೇ, ನಾನೇ ಪವರ್‌ಫುಲ್‌ ಅಂತಾ ಅತ್ತೆಗೆ ಮೆಸೇಜ್ ಪಾಸ್ ಮಾಡಬೇಕಿತ್ತು, ಮಾಡಿದೆ. ಅತ್ತೆನೂ ನನ್ನ ಪವರ್‌ಗೆ ಫಿದಾ ಆದಂಗಿದ್ದಾರೆ’

‘ನಿನ್ನ ಮೆಸೇಜ್‌ಗಿಷ್ಟು... ನಿನ್ನ ಬರ್ತ್‌ಡೇ ಮಾಡೋಕೆ ನಾನು ಸಾಲ ಮಾಡಬೇಕಾಯಿತು. ಈಗ, ನನ್ನ ತಮ್ಮನ ಹೆಂಡ್ತಿನೂ ನಿನ್ನಂಗೇ ಹಟ ಹಿಡಿದ್ರೆ ಏನ್ ಮಾಡೋದು’

‘ಅದೆಲ್ಲ ಆಗಲ್ಲ ಬಿಡಿ, ಅವಳ ಬರ್ತ್‌ಡೇ ಬರೋದ್ರೊಳಗೆ ಮುಂದಿನ ದೊಡ್ಡ ಹಬ್ಬ ಮುಗಿದೇಬಿಟ್ಟಿರುತ್ತೆ’ ಉಳಿದಿರೋ ಕೇಕ್ ಪೀಸ್‌ನ ನನ್ನ ಬಾಯಿಗೆ ತುರುಕಿ ಹೊರಟ್ಲು ಹೆಂಡ್ತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT