‘ಹಲೋ... ರೀ, ಪಾದಯಾತ್ರೆ ಪ್ರಯಾಣ ಸುಖಕರವಾಗಿ ಸಾಗ್ತಿದೆಯಾ?’ ಯಾತ್ರೆಯಲ್ಲಿರುವ ಶಾಸಕರಿಗೆ ಪತ್ನಿ ಫೋನ್ ಮಾಡಿದರು.
‘ಮೈಸೂರು ತಲುಪಿಬಿಟ್ಟರೆ ಸಾಕಪ್ಪಾ ಅನಿಸಿಬಿಟ್ಟಿದೆ’ ಶಾಸಕರು ಏದುಸಿರುಬಿಟ್ಟರು.
‘ಹುಯ್ಯೋ ಮಳೆಯಲ್ಲಿ ಪಾದಯಾತ್ರೆ ಹೊರಟಿದ್ದೀರಿ. ರೇನ್ ಕೋಟ್ ಬಿಚ್ಚಬೇಡಿ, ಛತ್ರಿ ಮುಚ್ಚಬೇಡಿ, ಮಳೆಯಲ್ಲಿ ನೆನೆದು ಶೀತ, ನೆಗಡಿಯಾಗಿ ಜ್ವರ ಬಂದು ಮಲಗಿಬಿಟ್ಟರೆ ಆಡಳಿತ ಪಕ್ಷದವರು ಆಡಿಕೊಂಡು ನಗ್ತಾರೆ’.
‘ಹಾಗೇನೂ ಆಗೋದಿಲ್ಲ. ಡಾಕ್ಟರ್, ಆಂಬುಲೆನ್ಸ್, ಮೊಬೈಲ್ ಆಸ್ಪತ್ರೆ ನಮ್ಮ ಜೊತೆಗಿವೆ’.
‘ಬೆಳಿಗ್ಗೆ ಏನು ತಿಂಡಿ ತಿಂದ್ರಿ? ಎಣ್ಣೆ ಐಟಂ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಜೇಬಿನಲ್ಲಿ ಡ್ರೈಫ್ರೂಟ್ಸ್ ಇಟ್ಟುಕೊಂಡು ದಾರಿಯುದ್ದಕ್ಕೂ ಬಾಯಿಗೆ ಎಸೆದುಕೊಂಡು ನೀರು ಕುಡಿಯಿರಿ’.
‘ಸರಿ’.
‘ಪಾದಯಾತ್ರೆಗೆ ಪೊಲೀಸರು ಅಡ್ಡಿ ಮಾಡ್ತಿಲ್ವಾ?’
‘ಇಲ್ಲ, ಅವರೂ ನಮ್ಮ ಜೊತೆ ನಡೆದು ಬರ್ತಿದ್ದಾರೆ’.
‘ಹೋಗ್ಲಿಬಿಡಿ, ಪಾದಯಾತ್ರೆ ಪುಣ್ಯದಿಂದ ಆ ಪೊಲೀಸರಿಗೆ ಪ್ರಮೋಷನ್ ಭಾಗ್ಯ ಸಿಗಲಿ. ರೀ, ಪಾದಯಾತ್ರೆ ನಿರ್ವಿಘ್ನವಾಗಿ ಸಾಗಲಿ ಅಂತ ನಿಮ್ಮ ಬೆಂಬಲಿಗರು ವಿಶೇಷ ಪೂಜೆ ಮಾಡಿಸಿ ಪ್ರಸಾದ ತಂದುಕೊಟ್ಟರು’. ಶಾಸಕರು ಖುಷಿಯಾದರು.
‘ನೀವು ಕ್ಷೇತ್ರದ ಕಡೆ ತಲೆ ಹಾಕಿ ತಿಂಗಳುಗಳಾಗಿವೆಯಂತೆ. ಮಳೆ ಸುರಿದು ರಸ್ತೆ, ಸೇತುವೆ ಹಾಳಾಗಿದ್ದರೂ ರಿಪೇರಿ ಮಾಡಿಸಿಲ್ಲ, ಹಾನಿ ಸಂತ್ರಸ್ತರ ಸಂಕಷ್ಟ ಕೇಳಲಿಲ್ಲ ಅಂತ ಜನ ನಿಮ್ಮ ಮೇಲೆ ಸಿಟ್ಟಾಗಿದ್ದಾರಂತೆ. ಹೀಗಾದ್ರೆ ಮುಂದೆ ಎಲೆಕ್ಷನ್ ಗೆಲ್ಲೋದು ಕಷ್ಟ ಆಗುವುದಂತೆ’. ಶಾಸಕರಿಗೆ ಆತಂಕ.
‘ಮೈಸೂರು ಯಾತ್ರೆ ಮುಗಿಸಿಬಂದು ಕಾಲುನೋವು, ಮಂಡಿನೋವು ಅಂತ ರೆಸ್ಟ್ ಮಾಡಬೇಡಿ’.
‘ಮತ್ತೇನು ಮಾಡಲಿ?’
‘ಕ್ಷೇತ್ರದಲ್ಲಿ ನಡಿಗೆ ಯಾತ್ರೆ ಆರಂಭಿಸಿ ಜನರ ಸಿಟ್ಟು ಶಮನಗೊಳಿಸಿ. ಈ ಯಾತ್ರೆಯಿಂದ ಆರೋಗ್ಯ ವೃದ್ಧಿ, ಅಧಿಕಾರ ಸಿದ್ಧಿ ಪ್ರಾಪ್ತಿಯಾಗುತ್ತವೆ...’ ಎಂದು ಹೇಳಿ ಪತ್ನಿ ಫೋನ್ ಕಟ್ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.