ಬಂಡೆ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ... ಮತಸಮರದೋಳ್ ನೀ ಗೆದ್ದ ವಿಜಯಗಳ ಮರ್ಮಾ... ಎಲ್ಲದಕು ಕಾರಣವು ಮೈತ್ರಿ ಪರಮಾತ್ಮಾ... ಅದಿದ್ದರೂ ನೀನೀಗ ತೃಣಕ್ಕೆ ಸಮಾನಾ...
ಬ್ರದರ್: ಅಪ್ರತಿಮ ಶೂರ, ನಾ ನಮೋ- ಶಾ ಬಲನೋ... ಮಂಡ್ಯದಲ್ಲಿ ಹೋರಾಡಿ ಮಂತ್ರಿ ಪದವಿಯಂ ಪಡೆದವನೋ... ನನ್ನ ಭಾವನನ್ ನಿಲ್ಲಿಸಿ, ನಿನ್ನ ಸೋದರನನ್ ಮನೆಗೆ ಕಳಿಸಿದವನೋ... ಉಗ್ರ ಪ್ರತಾಪೀ...
ಬಂಡೆ: ಉಗ್ರ ಪ್ರತಾಪಿ! ಹಹ್ಹ... ಮಂಡ್ಯದಲ್ಲಿ ಮಗ ಸೋತಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ... ಸೋದರನ ಮಕ್ಕಳು ಜೈಲು ಪಾಲಾದಾಗ ಎಲ್ಲಿ ಮಲಗಿತ್ತೋ ಈ ನಿನ್ನ ಧೈರ್ಯ... ಬಂಡೆ ಹುಲಿಗಳ ಗೆಲ್ಲೋ ಗುಂಡಿಗೆಯು ನಿನಗೆಲ್ಲೋ... ಖಂಡಿಸುವೆ, ಬಿಚ್ಚಿಡುವೆ ನಿನ್ನ ಅಕ್ರಮ ಆಸ್ತಿಯನೆಲ್ಲಾ...
ಬ್ರದರ್: ಫಡಫಡಾ ಆಸ್ತಿ ಬಿಚ್ಚಿಡುವೆನೆಂದಡಿಗಡಿಗೆ ನುಡಿಯಬೇಡ ನೋಡಾ... ನಿನ್ನ ಅಕ್ರಮ ಆಸ್ತಿಗಳು ನನಗೂ ಗೊತ್ತಿಲ್ಲವೆನಬೇಡಾ... ನಾ ಗಂಡುಗಲಿಗಳ ಗಂಡ, ಉದ್ದಂಡ, ಕೀರ್ತಿ ಪ್ರಚಂಡಾ...
ಬಂಡೆ: ದಂಡನೋ ಉದ್ದಂಡನೋ ನಿರ್ಧರಿಸುವುದು ನ್ಯಾಯಾಂಗ... ಹಾಕು ಕೇಸುಗಳ ಮಾಡುವೆ ಮಾನಭಂಗಾ...
ಬ್ರದರ್: ಹಾಕುವೆ ಕೇಸುಗಳ, ಬಿಚ್ಚಿಡುವೆ ನಿಮ್ಮ ಬಂಡವಾಳವ, ಉತ್ತರಿಸದೆ ನಿಮ್ಮನು ಬಿಡುವುದಿಲ್ಲಾ... ಗ್ಯಾರಂಟಿ ಗಳಗಂಟಿಯಲಿ ಗೆದ್ದವರು ನೀವು, ಮೂಡಾ ಕೇಸಿನಲಿ ಸಿಕ್ಕಿದ್ದೀರಲ್ಲಾ...
ಬಂಡೆ: ಮೂಡಾ ಮೂಡಾ ಎಂದ್ ಹೆದರಿಸಿದರೆ ಇಲ್ಯಾರಿಗೂ ಭಯವಿಲ್ಲಾ...
ಬ್ರದರ್: ರಾಮನಗರದ ಹೆಸರು ಬದಲಿಸಿ ಉಳಿದವರಿಲ್ಲಾ... ಇ.ಡಿ. ಹಿಡಿತಕ್ಕೊಪ್ಪಿಸಿ ನಿಮ್ಮನು ಜೈಲಿಗಟ್ಟದೆ ಬಿಡುವವನಲ್ಲಾ...
ಬಂಡೆ: ಅಬ್ಬರಿಸಿ ಬೊಬ್ಬಿರಿದರೆ ನಮ್ಮ ಸಿಎಂ ಇಳಿಯುವುದಿಲ್ಲಾ... ನಿಮ್ಮ ಪಾದಯಾತ್ರೆಯ ನಾಟಕ ಬಹಳ ದಿನ ನಡೆಯುವುದಿಲ್ಲಾ...
ಬ್ರದರ್: ಆರ್ಭಟಿಸಿ ಬರುತಿದೇ ನೋಡು ರಾಜ್ಯಪಾಲರ ತನಿಖಾಹ್ವಾನ...!
ಬಂಡೆ: ತನಿಖಾಹ್ವಾನಕ್ಕೇ ಈ ಪಂಥಾಹ್ವಾನ, ಹೆದರುವವನಲ್ಲ ಈ ಬಂಡೆ ಬಬ್ರುವಾಹನಾ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.