ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪ್ರಮಾಣವಚನ

Last Updated 26 ಜನವರಿ 2022, 19:31 IST
ಅಕ್ಷರ ಗಾತ್ರ

‘ಇದೇನ್ರೀ ಈ ಬೆಳವಣಿಗೆ? ಹಿಂದೆಲ್ಲ ಶಾಸಕರನ್ನು ರೆಸಾರ್ಟಿಗೆ ಕೊಂಡೊಯ್ಯುತ್ತಿದ್ದರು, ಕುರಿಗಳನ್ನ ವ್ಯಾನಿನಲ್ಲಿ ಹಾಕಿಕೊಂಡು ಹೋದಂತೆ. ಈಗ ಗೋವಾದಲ್ಲಿ ಭಾವಿ ಶಾಸಕರನ್ನು ದೇವಸ್ಥಾನಕ್ಕೆ, ಮಸೀದಿಗೆ, ಚರ್ಚ್‌ಗೆ ಕರೆದೊಯ್ಯುತ್ತಿದ್ದಾರೆ’ ಹೆಂಡತಿಯ ಉದ್ಗಾರ.

‘ಅಲ್ಲೇನೋ ಪ್ರಮಾಣ ಮಾಡಿಸ್ತಾರಂತೆ’ ಎಂದೆ.

‘ಶಾಸಕರಾದ ಮೇಲೆ ತಾನೆ ಪ್ರಮಾಣವಚನ ಸ್ವೀಕಾರ ಮಾಡೋದು’ ಎಂದು ಕೇಳಿದಳು.

‘ಆಯ್ಕೆಯಾದ ಮೇಲೆ ಪಕ್ಷವನ್ನು ತೊರೆಯೊಲ್ಲ ಅಂತ ಪ್ರಮಾಣ ಮಾಡಿಸೋದಿಕ್ಕೆ’.

‘ಓ! ಆ್ಯಂಟಿಸಿಪೇಟರಿ ಬೇಲ್ ತರಹ. ಇದು ಮುಂದುವರಿದರೆ ನಾಳೆ ಕರ್ನಾಟಕದಲ್ಲಿ ಗೆದ್ದವರನ್ನೆಲ್ಲ ರೆಸಾರ್ಟಿಗೆ ಕರೆದುಕೊಂಡು ಹೋಗೋಕೆ ಮುಂಚೆ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೇನೋ?’

‘ದೇವರಿಗೇನು ಕೆಲಸ?’

‘ನನ್ನನ್ನು ಮಂತ್ರಿ ಮಾಡಿ ಅಂತ ಹಟ ಮಾಡೊಲ್ಲ, ಚಳವಳಿ ಮಾಡಿಸೊಲ್ಲ, ಸ್ವಾಮೀಜಿ ಗಳಿಂದ ಒತ್ತಡ ಹಾಕ್ಸಲ್ಲ ಅಂತ ಪ್ರಮಾಣ ಮಾಡಿಸೋದಿಕ್ಕೆ’.

‘ಹಾಗೆಯೇ, ಮಂತ್ರಿ ಮಾಡಿದರೂ ಇಂತಹುದೇ ಖಾತೆ ಕೊಡಬೇಕು ಅಂತ ಕ್ಯಾತೆ ತೆಗೆಯೊಲ್ಲ ಅಂತ ಪ್ರಮಾಣ ಮಾಡಿಸೋಕೂ ದೇವರ ಮುಂದೆ ಕರೆದೊಯ್ಯಬಹುದು. ಈ ಪ್ರಮಾಣ ಮಾಡೋದಿಕ್ಕೆ ಬೇರೆ ಬೇರೆ ದೇವರುಗಳ ಮೊರೆ ಹೋಗಬೇಕೊ, ಸಿಂಗಲ್ ದೇವರು ಸಾಕೊ?’

‘ಅಂದರೆ?’

‘ಪಕ್ಷಾಂತರ ಮಾಡೊಲ್ಲ ಅನ್ನೋದಿಕ್ಕೆ ಒಬ್ಬ ದೇವರ ಮುಂದೆ, ಮಂತ್ರಿ ಮಾಡಿ ಅಂತ ಕೇಳಲ್ಲ ಅನ್ನೋದಿಕ್ಕೆ ಮತ್ತೊಬ್ಬ ದೇವರು, ಮಂತ್ರಿಯಾದ ಮೇಲೆ ನಿರ್ದಿಷ್ಟ ಖಾತೇನೇ ಬೇಕು ಅಂತ ಕೇಳದಿರೋಕ್ಕೆ ಇನ್ನೊಬ್ಬ ದೇವರು...’

‘ಹೌದು, ಕೆಲವರಿಗೆ ತಿರುಪತೀನೆ ಬೇಕು, ಕೆಲವರಿಗೆ ಧರ್ಮಸ್ಥಳ, ಉಳಿದವರಿಗೆ ನಂಜನಗೂಡು... ಆಗೇನು ಮಾಡೋದು?’

‘ಎಲ್ಲರನ್ನೂ ಎಲ್ಲೆಡೆ ಕರೆದುಕೊಂಡು ಹೋದರಾಯಿತು. ಆಗ ಎಲ್ಲ ದೇವರ ರಕ್ಷಣೆ ಹೈಕಮಾಂಡಿಗೆ ಇರುತ್ತದೆ. ಪಾಪ! ದೇವರಿಗೂ ರಾಜಕೀಯದ ಕಾಟ ತಪ್ಪೊಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT