ಮಂಗಳವಾರ, ಮಾರ್ಚ್ 28, 2023
33 °C

ಚುರುಮುರಿ: ತುರ್ತುಪರಿಸ್ಥಿತಿ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ತಿಂಡಿ ಕೊಟ್ಟು ಬಹಳ ಹೊತ್ತಾದರೂ ಮುಖ ಸೊಟ್ಟಗೆ ಮಾಡಿಕೊಂಡು ತಿನ್ನಲು ಒದ್ದಾಡುತ್ತಿದ್ದ ತೆಪರೇಸಿಯನ್ನು ಕಂಡು ಪಮ್ಮಿ ಕವಿ ಡುಂಡಿರಾಜರ ಸ್ಟೈಲಲ್ಲಿ ಕೇಳಿದಳು ‘ಪ್ರಿಯ, ನಿಮ್ಮ ಮುಖವೇಕೆ ಕಪ್ಪಿಟ್ಟಿದೆ?’

ಅದಕ್ಕೆ ತೆಪರೇಸಿ, ‘ನೀ ಮಾಡಿದ ಉಪ್ಪಿಟ್ಟಲ್ಲಿ ಎಣ್ಣೆಯೇ ಇಲ್ಲವಲ್ಲ ಪ್ರಿಯೆ, ನುಂಗಲು ಕಷ್ಟವಾಗುತ್ತಿದೆ’ ಎಂದ.

ಮಧ್ಯಾಹ್ನವೂ ಅದೇ ಕತೆ. ‘ಬೇಳೆ ಸಾರಲ್ಲಿ ಬೇಳೆ, ತರಕಾರಿ ಪಲ್ಯದಲ್ಲಿ ತರಕಾರಿಯೇ ಇಲ್ಲವಲ್ಲ ಪ್ರಿಯೆ’ ಎಂದು ರಾಗ ಎಳೆದ ತೆಪರೇಸಿ ಮೇಲೆ ಪಮ್ಮಿಗೆ ಸಿಟ್ಟು ಬಂತು.

‘ಸುಮ್ನೆ ಕೊಟ್ಟಿದ್ದು ತಿಂದೋಗೋಕಾಗಲ್ವ? ಎಣ್ಣೆ, ತರಕಾರಿ, ಬೇಳೆ ಎಲ್ಲ ಎಷ್ಟು ರೇಟಾಗಿದೆ ಗೊತ್ತಾ? ನೀವು ತರೋ ಸಂಬಳದಲ್ಲಿ ಇಷ್ಟೇ ಮಾಡೋಕಾಗೋದು’ ಎಂದು ರೇಗಿದಳು.

‘ಪದ್ಯಂ ವದ್ಯಂ, ಗದ್ಯಂ ಹೃದ್ಯಂ’ ಅಂತ ಕೇಳಿದ್ದೆ. ಇಲ್ಲಿ ‘ಗದ್ಯಂ ಯುದ್ಧಂ’ ತರ ಆಯ್ತಲ್ಲಪ್ಪ ಇದು ಎಂದುಕೊಂಡ ತೆಪರೇಸಿ ‘ನಾನೇನ್ ಮಾಡ್ಲಿ? ಪೆಟ್ರೋಲು, ಗ್ಯಾಸು ಎಲ್ಲ ರಾಕೆಟ್ ತರ ಏರ‍್ತಾ ಇವೆ. ಸಂಬಳ ಮಾತ್ರ ಅಷ್ಟೇ ಇದೆ’ ಎಂದು ತಿರುಗೇಟು ಕೊಟ್ಟ.

ಸಂಜೆ ಟೀ ಬರಲಿಲ್ಲ. ಅಡುಗೆ ಮನೆಯಲ್ಲಿ ಪಾತ್ರೆಗಳು ತಾಲಿಬಾನೀಯರ ಥರ ಸದ್ದು ಮಾಡತೊಡಗಿದವು. ಅದೇ ವೇಳೆಗೆ ‘ಏನ್ ಮಾಡ್ತಿದೀಯೋ ದೋಸ್ತಾ’ ಎನ್ನುತ್ತ ಗುಡ್ಡೆ ವಕ್ಕರಿಸಿದ.

‘ವಿಷಯ ಗೊತ್ತಾತ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿಯಂತೆ. ಪಾಪ ಅಲ್ವ? ಎಲ್ಲಿ ಪಮ್ಮಕ್ಕ ಕಾಣ್ತಿಲ್ಲ? ಜಲ್ದಿ ಚಾ ಮಾಡೋಕೇಳು’ ಎಂದ.

ತಾಲಿಬಾನ್ ಮಧ್ಯ ಇವನೊಬ್ಬ ತೆಲಿಬ್ಯಾನಿ ಎಂದು ಗೊಣಗಿದ ತೆಪರೇಸಿ, ‘ಜಾಸ್ತಿ ಅವಾಜ್ ಮಾಡ್ಬೇಡ, ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ರೆ ನಮ್ಮನೆ ಅಡುಗೆ ಮನೇಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದೆ, ಹುಷಾರು’ ಎಂದ. ಗುಡ್ಡೆಗೆ ಅರ್ಥವಾಯಿತು.

ಪಿಟಿಕ್ಕೆನ್ನದೆ ಅಫ್ಗಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಹಾಗೆ ಮನೆಯಿಂದ ತೆಪರೇಸಿ ಮೆಲ್ಲಗೆ ಜಾಗ ಖಾಲಿ ಮಾಡಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು