ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಎಲ್ಲರಂತಲ್ಲ...

Last Updated 11 ಮೇ 2021, 19:31 IST
ಅಕ್ಷರ ಗಾತ್ರ

ಪೊಲೀಸ್ ಶಂಕ್ರಿ ಡ್ಯೂಟಿಗೆ ಹೊರಡಲು ರೆಡಿಯಾಗಿದ್ದರು. ‘ಏನ್ರೀ, ಎಲ್ಲರ ಮನೆ ಗಂಡಂದಿರು ಮನೆಗೆ ಬಂದು ಮಲಗುವ ಟೈಂನಲ್ಲಿ ನೀವು ‘ಡೋರ್‌ಲಾಕ್ ಮಾಡಿಕೊಂಡು ಹುಷಾರಾಗಿ ಮಲಗು’ ಅಂತ ಹೇಳಿ ನೈಟ್ ಡ್ಯೂಟಿಗೆ ಹೋಗ್ತೀರಿ, ಲಾಕ್‍ಡೌನ್‍ನಲ್ಲಿ ಎಲ್ರೂ ಮನೇಲಿರಬೇಕು ಅಂತ ಸರ್ಕಾರವೇ ಹೇಳಿದೆ. ಎಲ್ರೂ ಮನೇಲಿರುವಾಗ ನೀವು ಮಾತ್ರ ಡ್ಯೂಟಿಗೆ ಹೋಗ್ತೀರಿ...’ ಸುಮಿಗೆ ಸಂಕಟ.

‘ಜನ ರೋಡಿಗೆ ಬಂದ್ರೆ ಕೊರೊನಾ ಅಟ್ಯಾಕ್ ಮಾಡುತ್ತೆ’ ಅಂದರು ಶಂಕ್ರಿ.

‘ನೀವೂ ಜನ ಅಲ್ವಾ? ನಿಮ್ಮನ್ನ ಅಟ್ಯಾಕ್ ಮಾಡಲ್ವಾ? ಪೊಲೀಸರಿಗೆ ಕಳ್ಳರು ಹೆದರಬಹುದು, ಕೊರೊನಾ ಹೆದರುತ್ತಾ?’

‘ಕೊರೊನಾ ನಮಗೇನೂ ಮಾಡಲ್ಲ. ಮಾಸ್ಕ್, ಸ್ಯಾನಿಟೈಸರ್ ಹಾಕ್ಕೊಳ್ತೀವಿ, ಕೈಯಲ್ಲಿ ಲಾಠಿ ಇದ್ರೆ ಜನನೇ ಹತ್ರ ಬರೋಲ್ಲ, ಇನ್ನು ಕೊರೊನಾ ಬರುತ್ತಾ? ಹಹ್ಹಹ್ಹಾ...’

‘ಕೊರೊನಾ ಡ್ಯೂಟಿಗೆ ಲಾಠಿ ಬೇಕೇಬೇಕೇನ್ರೀ?’

‘ಹೌದು, ಇಲ್ಲಾಂದ್ರೆ ಕಂಟ್ರೋಲ್ ಮಾಡಕ್ಕಾಗೊಲ್ಲ. ಹೋದ ವರ್ಷ ಲಾಕ್‍ಡೌನ್‍ನಲ್ಲಿ ನಾನು 18 ಲಾಠಿ ಮುರಿದು ದಾಖಲೆ ಮಾಡಿದ್ದೆ. ನಮ್ಮ ಸ್ಟೇಷನ್‍ನಲ್ಲಿ ಯಾರೂ ದಾಖಲೆ ಮುರಿದಿಲ್ಲ. ನಮ್ಮ ಸಾಹೇಬ್ರು ವೆರಿಗುಡ್ ಅಂದ್ರು, ಅವಾರ್ಡ್‌ಗೆ ನನ್ನ ಹೆಸರನ್ನು ಶಿಫಾರಸು ಮಾಡ್ತಾರಂತೆ’.

‘ಕೊರೊನಾಗೆ ಟ್ರೀಟ್‍ಮೆಂಟ್ ಕೊಡೋದು ಡಾಕ್ಟರ್ ಅಲ್ವೇನ್ರೀ?’

‘ಡಾಕ್ಟರ್‌ಗಳು ಕಾಯಿಲೆ ಬಂದ ಮೇಲೆ ಟ್ರೀಟ್‍ಮೆಂಟ್ ಕೊಡ್ತಾರೆ, ಕಾಯಿಲೆ ಬರಬಾರದು ಅಂತ ನಾವು ಟ್ರೀಟ್‍ಮೆಂಟ್ ಕೊಡ್ತೀವಿ’.

‘ಕೊರೊನಾ ಕಂಟ್ರೋಲಿಗೆ ಲಸಿಕೆಗಿಂತ ನಿಮ್ಮ ಲಾಠಿನೇ ಪರಿಣಾಮಕಾರಿ ಕಣ್ರೀ... ಒಂದು ಥರದಲ್ಲಿ ನೀವು ಡಾಕ್ಟರ್‌ಗಿಂತಾ ಗ್ರೇಟ್...’ ಸುಮಿಗೆ ಹೆಮ್ಮೆ.

‘ಹೌದು ಮತ್ತೆ, ನೀನು ಬೇಸರ ಮಾಡಿಕೊಂಡು ಕಳಿಸಿದ್ರೆ ಡ್ಯೂಟಿಯಲ್ಲಿ ಲಾಠಿ ಬೀಸಕ್ಕಾಗಲ್ಲ...’ ಪತ್ನಿಯನ್ನು ರಮಿಸಿ ಹೊರಟರು ಶಂಕ್ರಿ.

‘ಎಲ್ಲರಂತಲ್ಲ ನನ್ನ ಗಂಡ...’ ಎಂದು ಸುಮಿ ಕಣ್ಣು ಒರೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT