ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಳ್ಳ-ಮಳ್ಳ ವೈರಸ್

Last Updated 17 ಜನವರಿ 2022, 18:08 IST
ಅಕ್ಷರ ಗಾತ್ರ

‘ಒಮೈಕ್ರಾನ್ ವೈರಸ್ಸು ದಿನದಿನಕೆ ಕಲಿಯಾಯ್ತಾದೆ. ಇನ್ನು ಮುಂದ್ಕೆ ಬದುಕೆಂಗೆ?’ ನನ್ನ ಚಿಂತೆ ಹೇಳಿಕ್ಯಂಡೆ.

‘ನೋಡ್ಲಾ ಅಣ್ತಮ್ಮಾ, ಕೊರೊನಾ, ಒಮೈಕ್ರಾನ್ ಬರದಂಗೆ ಹುಸಾರಾಗಿರಬೌದು. ಕಳ್ಳ ವೈರಸ್ಸು, ಮಳ್ಳ ವೈರಸ್ಸು, ಸುಳ್ಳು ವೈರಸ್ಸು ಅಂತ ಮೂರು ಡೇಂಜರ್ ವೈರಸ್ಸವೆ. ಕಳ್ಳ ವೈರಸ್ಸು ದೊಡ್ಡ ರಾಜಕಾರಣಿಗಳು, ಪುಢಾರಿಗಳಿಗೆ ಮಾತ್ರ ಅಮರಿಕ್ಯತದೆ! ಸೋಂಕಿತರಿಗೆ ಸ್ಟೀಲ್ ಬ್ರಿಡ್ಜ್ ವೈರಸ್, ನೀರಾವರಿ ವೈರಸ್, ವೈಟ್ ಟಾಪಿಂಗ್ ವೈರಸ್, ಪರ್ಸೆಂಟೇಜ್ ವೈರಸ್, ಚುನಾವಣಾ ರ‍್ಯಾಲಿ ವೈರಸ್, ಬರ್ತಡೇ ವೈರಸ್, ಮೇಕೆಘಾಟು ವೈರಸ್, ಕರ್ನಾಟಕ ಬಂದ್ ವೈರಸ್ ಅಂತ ಅಡ್ನಾಡಿ ವೈರಸ್ ಅಟ್ಯಾಕಾಗಿರತವೆ! ಈ ಸೋಂಕಿತರು ಜನ ಸೇರಿಸಿಗ್ಯಂಡು ನಮಗೆ ಕೊರೊನಾ ಕೊಟ್ಟು ಬಾಳಗೆಡಿಸಿ ತಾವು ಉದ್ಧಾರಾಯ್ತರೆ!’ ತುರೇಮಣೆ ಮಾತು
ನನಗರ್ಥವಾಗಲಿಲ್ಲ.

‘ಏನು ಕತೆ-ಕರ್ಮ! ಮಳ್ಳ ವೈರಸ್ ಯಾವುದು ಸಾ?’ ಅಂತ ವಿಚಾರಿಸಿದೆ.

‘ಅಣ್ತಮ್ಮಾ, ಇದು ಪೊಗರು ಹೆಚ್ಚಾದವುಕ್ಕೆ ತಗಲಿಕ್ಯತದೆ. ಕರ್ಫ್ಯೂ ಹಾಕಿದಾಗ ಮಾಸ್ಕಾಕದೇ ಮೂತಿ ಬುಟ್ಕಂದು ಕೊತ್ತಂಬ್ರಿ ತರಕ್ಕೆ ಮಾರ್ಕೆಟ್ಟಿಗೋಯ್ತವೆ. ಪೊಲೀಸಿಗೆ ಸಿಗಾಕ್ಕ್ಯಂಡಾಗ ‘ನಮ್ಮಪ್ಪನ ಚಿಗಪ್ಪನ ಮಾವನ ಅತ್ತೆ ತಮ್ಮನ ಮಗಳ ಗಂಡನ ಬೀಗರಿಗೆ ಉಸಾರಿಲ್ಲ ನೋಡಕ್ಕೋಯ್ತಿದೀವಿ ಸಾ!’ ಅಂತ ಗ್ವಾಗರಿತವೆ. ಇನ್ನು ಕೆಲವು ‘ಎಲ್ಲ್ಯದೆ ಕೊರೊನಾ? ನಮಗೆ ಅವ್ಯಾವೂ ಬರಕುಲ್ಲ, ಮಾಸ್ಕ್ಯಾಕೆ?! ದೊಡ್ಡೋರಿಗೊಂದು ನಮಗೊಂದು ರೂಲ್ಸಾ?’ ಅಂತ ಮೂಗಂಡುಗ ಮಾತಾಡ್ತವೆ. ‘ಗಾಡಿ ಸೀಜ್ ಮಾಡ್ತೀವಿ! ಮಾಸ್ಕಾಕಿಲ್ಲ ದಂಡ ಕಟ್ರೀ’ ಅಂತ ಕುಂಡಿ ಮ್ಯಾಲೆ ಎರಡು ಬುಟ್ರೆ ‘ಪೋಲೀಸು ದೌರ್ಜನ್ಯ!’ ಅಂತ ಕಣ್ಣಗೆ ನೀರಾಕ್ಕತವೆ’ ಅಂತಂದ್ರು.

‘ಇನ್ನು ಸುಳ್ಳು ವೈರಸ್ ಯಾವುದು?’ ಕೇಳಿದೆ.

‘ಬ್ಯಾರೆ ದೇಸದಿಂದ ಬಂದು ಇಲ್ಲಿ ಡ್ರಗ್ ಯವಾರ ಮಾಡವು, ವಾಟ್ಸಪ್ಪು, ಟ್ವಿಟ್ಟರಿನಗೆ ಬಂದುದ್ದನ್ನೆಲ್ಲಾ ಫಾರ್ವರ್ಡ್ ಮಾಡಿ ಕಳಿಸವು! ಈಥರಾ ಇರ್ತವೆ ಕಯ್ಯಾ!’ ಅಂದ್ರಲ್ಲಾ ವೈರಸ್ ಕಾರುಬಾರಲ್ಲಿ ಯಾವುದೂ ಊರ್ಜಿತಾಗಕುಲ್ಲ ಅನ್ನಿಸ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT