ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪ್ರತಿಭಾ ಸಿದ್ಧಾಂತ

Last Updated 18 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

‘ಯಾಕೋ ಬಲೆ ಕಾಲುನೋವು, ಸೊಂಟನೋವು ಕಲಾ. ಏನು ಮಾಡಿದ್ರೂ ಕಮ್ಮಿಯಾಯ್ತಿಲ್ಲ!’ ತುರೇಮಣೆ ಕೊರಗಿದರು.

‘ಜನಸಂಕಲ್ಪಕ್ಕೋ ಪಾದಯಾತ್ರೆಗೋ ಹೋಗಿ ಪಸಕೆ ಎತ್ತಿಕ್ಯಂದು ಬನ್ನಿ ಸಾ. ನಡಕಂದೋಗದ್ರಿಂದ ಕೊಬ್ಬೆಲ್ಲಾ ಕರಗಿ ಹುಸಾರಾಯ್ತಿರ!’ ಅಂತಂದೆ.

‘ಪಾದಯಾತ್ರೆಗಳೂ ನಮ್ಮ ರೂಪಾಯಿ ಇದ್ದಂಗೆ. ಅವುಕ್ಕೆ ಈಗ ಬೆಲೇನೇ ಇಲ್ಲ. ಪಾದ ಯಾತ್ರೆಗಳೆಲ್ಲಾ ನಿಶಾನೆ ಹಿಡಕಂದು ದಿಬ್ಬಣ ಹೋದಂಗೆ ಹೋಯ್ತಿರತವೆ. ಜನಕ್ಕೆ ತೊಂದರೆ ಆದ್ರೂ ಡೋಂಟ್ ಕೇರ್. ನಾವು ಅವುಗಳ ಹಿಂದುಗಟ್ಟಿ ಹೋದ್ರೆ ನಮಗೆ ದೂಳೇ ಗತಿ’ ಅಂದ ಚಂದ್ರು.

‘ಅಲ್ಲ ಕನ್ರೋ, ದೇಸದೇಲಿ ದಿನಕ್ಕೆ 145 ರೂಪಾಯಿಗಿಂತ ಕಡಮೆ ಆದಾಯ ಇರೋರು ಕಡು ಬಡವರು ನೂರಕ್ಕೆ ಹನ್ನೆರಡು ಜನ ಇನ್ನೂ ಅವ್ರಂತೆ! ಶಾಸಕರೆಲ್ಲಾ ಅವರವರ ಕ್ಷೇತ್ರಕ್ಕೋಗಿ ಬಡವರು, ರೈತರು, ನೆರೆ ಸಂತ್ರಸ್ತರ ಕಷ್ಟ ಪರಿಹಾರ ಮಾಡದು ಬುಟ್ಟು ಎಲ್ಲಾರೂ ಪಾದಯಾತ್ರೆ ಮಾಡಿಕ್ಕೆ ಹೊಂಟ್ರೆ ಅಚ್ಚೆ ದಿನ್ ಬಂದದಾ?’ ಯಂಟಪ್ಪಣ್ಣ ಗುರುಗುಟ್ಟಿತು.

‘ಪಾದಯಾತ್ರೆಗಳು ರಾಜಕಾರಣಿಗಳ ರಾಜಕೀಯ ಆರೋಗ್ಯ ಇಂಪ್ರೂವ್ ಮಾಡ್ತವೆ ಕನಣೈ. ಹುಲಿಯಾ, ಡಿಕೆ ರಂಗಾಯ್ತಿರದು ಕಂಡು ‘ನಾವೂ ಸಂಕಲ್ಪಯಾತ್ರೆ ಮಾಡೇಮಾಡ್ತೀವಿ’ ಅಂತ ಮದಗುಡ್ತಾದೆ ಕಮಲ ಟೀಂ. ‘ಕಾಲುನೋವು, ಸೊಂಟನೋವು ಮಡಿಕಂದು ನಾಕೇನಾಕು ಕಿಲೊಮೀಟರ್ ನಡೆಯಕ್ಕಾದದೇನ್ರೀ ನಿಮಗೆ?’ ಅಂತ ಹುಲಿಯಾ ಚಾಲೆಂಜ್ ಮಾಡ್ಯದೆ!’ ಅಂತಂದೆ.

‘ಅದು ಬುಡಿ ಅತ್ತಗೆ. ಈಗ ಮಧ್ಯಪ್ರದೇಶದ ಹೈಕ್ಳಿಗೆ ಹಿಂದಿ ಭಾಷೇಲಿ ಎಂಬಿಬಿಎಸ್ ಓದಕೆ ಅನುಕೂಲ ಮಾಡ್ಯವುರಂತೆ. ಒಳ್ಳೆ ಪ್ರತಿಭೆ ಇದ್ರೆ ಕನ್ನಡದಲ್ಲೂ ಎಂಬಿಬಿಎಸ್ ಮಾಡಬೌದಂತೆ. ಆಗ ಪ್ರತಿಭಾ ಪಲಾಯನ ತಪ್ಪಿ ಪ್ರತಿಭಾ ಪೋಷಣೆ ಆಯ್ತದಂತೆ!' ಅಂತಂದ ಚಂದ್ರು.

‘ಅಲ್ಲಾ ಈ ಪ್ರತಿಭೆ ಅಂದ್ರೆ ಯಾರ್‍ಲಾ ಆವಮ್ಮ?’ ಅಂತು ಯಂಟಪ್ಪಣ್ಣ.

‘ಅಣೈ, ಅದು ನಮ್ಮ ರಾಜಕಾರಣಿಗಳ ತಾವು ಇಲ್ದೇ ಇರೋ ಕೌಶಲ’ ತುರೇಮಣೆ ಕುರ್ತೇಟಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT