ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವ್ಯಾಕ್ಸಿನ್ ಸ್ನೇಹ

Last Updated 17 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಳ್ಳಂಬೆಳಗ್ಗೆ ರಾಜಾಹುಲಿ ಫೋನ್ ಮಾಡಿದ್ದರಿಂದ ಹುಲಿಯಾ ಆಶ್ಚರ್ಯಾಘಾತಕ್ಕೆ ಪಕ್ಕಾದರು. ಸಾವರಿಸಿಕೊಂಡು, ‘ಏನಣ್ಣ... ಮತ್ತ ಕುರ್ಚಿ ಭಯಂಕರ ಅಲುಗಾಡಾಕೆ ಹತ್ತೈತಂತ... ಎಲ್ಲರ ಬಿದ್ದೀಯಪ್ಪೋ, ಜ್ವಾಕಿ’ ಎಂದು ಕಾಳಜಿಯಿಂದಲೇ ಹೇಳಿದರು.

‘ಬೆಳ್ಬೆಳಗ್ಗಿ ಎದಕ್ಕ ಅಪಶಕುನ ಮಾತಾಡತೀ. ಕೋವಿಡ್ ವ್ಯಾಕ್ಸೀನು ಹಾಕಿಸಿಕೊಳ್ಳಾಕ ಹೋಗೂ ಣಂತ ಹೇಳಾಕ ಫೋನ್ ಮಾಡಿದೆ. ಇಬ್ಬರೂ ಎಪ್ಪತ್ತು ದಾಟೀವಿ, ಆರೋಗ್ಯ ಮೊದ್ಲು’ ರಾಜಾ ಹುಲಿಯೂ ಅಷ್ಟೇ ಕಾಳಜಿಯಿಂದ ಹೇಳಿದರು.

ರಾಹುಲಣ್ಣೋರು ಭಾರತ ನಿರ್ಮಿತ ವ್ಯಾಕ್ಸೀನುಗಳ ಅಭಿವೃದ್ಧಿಪಡಿಸಿದವರ ಬಗ್ಗೆ ಒಂದು ಮಾತೂ ಹೊಗಳಿಲ್ಲ, ನಾವೆಲ್ಲ ಹಾಕಿಸ್ಬಕೋ ಬ್ಯಾಡವೋ ಅಂತಲೂ ಹೇಳಿಲ್ಲ... ಏನ್ ಮಾಡೂದಂತ ಹುಲಿಯಾಗೆ ಯೋಚನೆಯಾಯಿತು.

‘ಕುಮಾರನ್ನೂ ಕರೀತೀನಿ’ ಎಂದ ರಾಜಾಹುಲಿ, ಕಾನ್ಫರೆನ್ಸ್ ಕಾಲ್‌ಗೆ ಕುಮಾರಣ್ಣನ ನಂಬರ್ ಒತ್ತಿದರು. ರಾಜಾಹುಲಿ, ಹುಲಿಯಾ ಸೇರಿ ಏನು ಖೆಡ್ಡಾ ಮಾಡಿದಾರೋ ಎಂದು ಅನುಮಾನದಿಂದಲೇ ಕುಮಾರಣ್ಣ ಫೋನೆತ್ತಿದರು.

‘ಕುಮಾರೂ, ನಾನು, ನೀನು ಮತ್ತ ಹುಲಿಯಾ ಮೂರೂ ಮಂದಿ ಸೇರಿ ನಾಳೆ ವ್ಯಾಕ್ಸೀನು ಹಾಕಿಸಿಕೊಳ್ಳಾಕ ಹೋಗೂಣಪ್ಪ’ ಎಂದರು.

‘ರಾಗಿತೆನೆ ಹೊತ್ತು ಮಾತಿಲ್ಲದೇ ಹೊಂಟಿದ್ದ ನಮ್ಮ ಲಕ್ಷ್ಮೀ ಡಾಕ್ಟರ ಜಡೆಗೆ ಕಮಲ ಮುಡಿಸೋ ಕಾರ್ಯಕ್ರಮ ಮಾಡತೀರಂತ... ಇದು ನ್ಯಾಯಾನಾ’ ಅಂತ ಕುಮಾರಣ್ಣ ಕಣ್ಣೀರಾದರು.

‘ಕುಮಾರೂ... ಆಪರೇಶನ್ ಕಮಲ ಬ್ಯಾರೆ, ಆಪರೇಶನ್ ಕೋವಿಡ್ ಬ್ಯಾರೆ. ನಿಂಗೂ ಅರವತ್ತಾತಪಾ, ಆರೋಗ್ಯ ಮುಖ್ಯ. ನಾಳೆ ಲಗೂನೆ ಮೂರೂ ಮಂದಿ ಹೋಗೂಣು’ ಎಂದರು. ಮರುದಿನ ಹೀಗೆ ಮೂವರೂ ಜೊತೆಯಾಗಿ ಹೋಗಿ, ಅಕ್ಕಪಕ್ಕ ಕುಂತು ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಸ್ನೇಹಮಯ ದೃಶ್ಯವನ್ನು ನೋಡುತ್ತ... ಕರುನಾಡಿನಲ್ಲಿ ರಾಮರಾಜ್ಯ ಶುರುವಾಯಿತೆಂದು ಸಂತಸಪಡುವಷ್ಟರಲ್ಲಿ...

ಕನಸು ಕಾಣುತ್ತಿದ್ದ ನನ್ನನ್ನು ಬೆಕ್ಕಣ್ಣ ‘ವ್ಯಾಕ್ಸೀನು ಪಟ್ಟೀವಳಗ ನನ್ನ ಹೆಸರೇ ಇಲ್ಲ’ ಎನ್ನುತ್ತ ಎಬ್ಬಿಸಿಬಿಡುವುದೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT