ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಜೈಲೇ ಸುರಕ್ಷಿತ!

Last Updated 9 ಜೂನ್ 2021, 19:30 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದ ಕಾಲಿಗೆ ವಾಕಿಂಗ್ ಇಲ್ಲದೇ, ನಾಲಿಗೆಗೆ ಚಪ್ಪರಿಸಲು ಗಾಸಿಪ್ಪುಗಳಿಲ್ಲದೇ, ಗಂಟಲಿಗೆ ಸರಿಯಾಗಿ ಪೆಗ್ಗುಗಳಿಲ್ಲದೇ, ಆಕ್ಸಿಜನ್ ಅರವತ್ತಕ್ಕೆ ಇಳಿದವರಂತೆ ಬಸವಳಿದಿದ್ದ ಬದ್ರಿ.

ಈ ಮಧ್ಯೆ ಅಪ್ಪನಿಗೆ ಮಗ ವಾಟ್ಸ್‌ಆ್ಯಪ್ ಖಾತೆ ಬೇರೆ ತೆಗೆದುಕೊಟ್ಟಿದ್ದ. ಮೊದಲ ಬಾರಿಗೆ ಕೈಗೆ ಬಣ್ಣದ ಪೆನ್ಸಿಲ್ ಸಿಕ್ಕ ಮಗು ಮನೆಯ ಗೋಡೆಗಳ ಮೇಲೆಲ್ಲಾ ಗೀಚುವಂತೆ, ಬದ್ರಿ ವಾಟ್ಸ್‌ಆ್ಯಪ್‌ನಲ್ಲಿ ಕಂಡದ್ದನ್ನೆಲ್ಲಾ ಫಾರ್ವರ್ಡ್ ಮಾಡುತ್ತಾ ಸಮಯ ಕಳೆಯತೊಡಗಿದ್ದ.

ಒಂದು ಸಂಜೆ ಬದ್ರಿ ಮೊಬೈಲ್ ಪರದೆಯನ್ನು, ವೀಳ್ಯದೆಲೆಗೆ ಸುಣ್ಣ ತೀಡುವಂತೆ ತಿಕ್ಕುತ್ತಾ ಕುಳಿತಿರುವಾಗ ಹೆಂಡತಿ ಒಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿದಳು: ‘ರೀ... ಲಾಕ್‌ಡೌನ್ ವಿಸ್ತರಿಸಿದ್ದಾರೆ!’ ಅದೇ ಸುದ್ದಿಯನ್ನು ನೂರಾರು ವಾಟ್ಸ್‌ಆ್ಯಪ್ ಗುಂಪುಗಳಿಗೆ ಫಾರ್ವರ್ಡ್ ಮಾಡಿದ್ದರೂ ಬದ್ರಿಗೆ ಆ ವಿಷಯ ಗಮನಕ್ಕೇ ಬಂದಿರಲಿಲ್ಲ. ಅಚ್ಚರಿಯಿಂದ ಗೆಳೆಯ ತಿಂಗಳೇಶನಿಗೆ ಫೋನು ಹಚ್ಚಿದ. ‘ವಿಸ್ತರಣೆ ವಿಷಯ ಗೊತ್ತಾಯ್ತಾ?’

‘ಹ್ಞೂಂ... ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳುವ ಸಮಯ ವಿಸ್ತರಿಸಿದ್ದಾರಂತೆ’.

‘ಲಾಕ್‌ಡೌನ್ ವಿಸ್ತರಣೆ...’ ಎಂದು ವಿವರಿಸಲು ಹೊರಟ ಬದ್ರಿ.

‘ಅದನ್ನು ವಾರದ ಹಿಂದೆ ಸುದ್ದಿ ವಾಹಿನಿಗಳೇ ನಿರ್ಧರಿಸಿದ್ದವು. ಈಗ ಮುಖ್ಯಮಂತ್ರಿ ಅನಿವಾರ್ಯವಾಗಿ ಘೋಷಣೆ ಮಾಡಿದ್ದಾರೆ, ಅಷ್ಟೇ...’

ಹೊಸ ಸುದ್ದಿ ತಿಳಿಸುವ ಪ್ರಯತ್ನ ಹುಸಿಯಾದ್ದರಿಂದ ಬದ್ರಿ ಮತ್ತೊಂದು ವಿಷಯ ಪೋಣಿಸಿದ.

‘ಕೋವಿಡ್ ಮೂರನೇ ಅಲೆ ಎದುರಿಸಲು ಜೈಲುಗಳ ಸಂಖ್ಯೆ ಹೆಚ್ಚಿಸಬೇಕಾಗುತ್ತದೆ...’

ಇದೇನು ತಜ್ಞರ ಸಲಹೆಯೋ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನವೋ ಎಂದು ತಿಳಿಯದೇ ತಿಂಗಳೇಶ ಕಂಗಾಲಾದ.

‘ಮೈಸೂರಿನ ಕೈದಿಗಳು ಪೆರೋಲ್ ಸಿಕ್ಕರೂ ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಜೈಲಲ್ಲೇ ಇರಲು ತೀರ್ಮಾನಿಸಿದ್ದಾರೆ. ಇದೇ ಉಪಾಯ ಹೂಡಿ, ಮುಂಬರುವ ದಿನಗಳಲ್ಲಿ ಜನ ಜೈಲು ಸೇರಲು ಮುಗಿಬೀಳುತ್ತಾರೆ. ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗಿಂತ, ಮನೆಸೆರೆಗಿಂತ ಜೈಲೇ ಸುರಕ್ಷಿತ ಎನ್ನಿಸಿದರೆ ತಪ್ಪೇನು?’ ತಿಂಗಳೇಶನಿಗೂ ಹೌದೆನ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT