ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಎಣ್ಣೆ ಏಟು

Last Updated 23 ಮಾರ್ಚ್ 2022, 20:15 IST
ಅಕ್ಷರ ಗಾತ್ರ

‘ರೀ, ನಿಮ್ಮ ಮನೆ ಒಗ್ಗರಣೆ ಸೌಂಡಿನಿಂದ ನಮ್ಮ ಮಗಳ ಓದಿಗೆ ಡಿಸ್ಟರ್ಬ್ ಆಗುತ್ತೆ, ಒಗ್ಗರಣೆಯ ಸಾಸಿವೆ ಸಿಡಿತ ಕೇಳಿದ್ರೆ ನನ್ನ ಹೊಟ್ಟೆಯಲ್ಲಿ ಬಾಂಬ್ ಸಿಡಿದಂತಾಗುತ್ತೆ. ನೀವು ಒಗ್ಗರಣೆ ಹಾಕಕೂಡದು...’ ಪಕ್ಕದ ಮನೆ ಪದ್ಮಾ ಬಂದು ಅನುಗೆ ವಾರ್ನಿಂಗ್ ಕೊಟ್ಟಳು.

‘ನಮ್ಮ ಮನೆ ಒಗ್ಗರಣೆಗೆ ನಿಮ್ಮ ಅಪ್ಪಣೆ ಬೇಕಿಲ್ಲ, ನಿಮ್ಮ ಒಗ್ಗರಣೆಗೆ ನಾನು ಯಾವತ್ತಾದ್ರೂ ಆಕ್ಷೇಪ ಮಾಡಿದ್ದೀನಾ?’ ಅನು ತಿರುಗಿಸಿ ಹೇಳಿದಳು.

‘ನಮ್ಮದು ಒಗ್ಗರಣೆ ಇಲ್ಲದ ಸಂಸಾರ. ಮಗಳ ಪರೀಕ್ಷೆ, ರಷ್ಯಾ- ಉಕ್ರೇನ್ ಯುದ್ಧ ಮಗಿಯುವವರೆಗೂ ಎಣ್ಣೆಯನ್ನು ಅವಾಯ್ಡ್ ಮಾಡಿದ್ದೇವೆ’.

‘ಎಣ್ಣೆ ರೇಟಿನ ಏಟಿನಿಂದ ನಿಮಗೆ ತಲೆ ಕೆಟ್ಟಿದೆ, ಡಾಕ್ಟರ್ ಹತ್ರ ಹೋಗಿ ಟ್ರೀಟ್‍ಮೆಂಟ್ ತಗೊಳ್ಳಿ...’ ಅನು ಸಿಟ್ಟಿಗೆದ್ದಳು.

‘ನನಗೇನು ತಲೆ ಕೆಟ್ಟಿಲ್ಲ, ಎಣ್ಣೆ ಪದಾರ್ಥ ತಿಂದು ನಿಮಗೆ ಕೊಬ್ಬು ಜಾಸ್ತಿಯಾಗಿದೆ...’ ಪದ್ಮಾ ರೇಗಿದಳು.

‘ಸಾಸಿವೆ ಸಿಡಿಯುವಷ್ಟಾದ್ರೂ ಒಗ್ಗರಣೆಗೆ ಎಣ್ಣೆ ಹಾಕುವುದು ಬೇಡ್ವೇನ್ರೀ?’

‘ಬೇಕಾಗೊಲ್ಲ, ಬೆಲೆ ಇಳಿಯುವವರೆಗೂ ಎಣ್ಣೆಯ ಸಹವಾಸ ಬೇಡ ಅಂತ ನಾನು ಆಯಿಲ್‍ಲೆಸ್ ಅಡುಗೆ ಮಾಡುತ್ತಿದ್ದೇನೆ. ಮನೆಗೆ ಅತಿಥಿಗಳು ಬಂದಾಗ ಅವರಿಗಾಗಿ ಎಣ್ಣೆಯಲ್ಲಿ ವಡೆ, ಬೋಂಡ ತೇಲಿಸಿದರೆ ನಾವು ಮುಳುಗಿಬಿಡ್ತೀವಿ ಅಂತ ನನ್ನ ಗಂಡ ಬಾಣಲಿ, ಜಾಲರಿಯನ್ನು ಅಟ್ಟದ ಮೇಲಿಟ್ಟಿದ್ದಾರೆ’.

‘ನಮಗೆ ಆಯಿಲ್‍ಲೆಸ್ ಅಡುಗೆ ರುಚಿಸುವುದಿಲ್ಲ...’

‘ಕೊನೆಯದಾಗಿ ಹೇಳ್ತೀನಿ, ನಿಮ್ಮ ಮನೆ ಒಗ್ಗರಣೆ ಸೌಂಡು, ಘಾಟು ನಮ್ಮ ಮನೆ ಕಡೆ ಬರಕೂಡದು’.

‘ಹಾಗಂತ ಕಿಟಕಿ, ಬಾಗಿಲು ಹಾಕಿಕೊಂಡು ಒಗ್ಗರಣೆ ಹಾಕಲಾಗುತ್ತಾ?’

‘ಏನಾದ್ರೂ ಮಾಡಿಕೊಳ್ಳಿ, ನಮ್ಮ ಮಗಳ ಮೆಡಿಕಲ್ ಸೀಟು ಮಿಸ್ಸಾದ್ರೆ ಅದಕ್ಕೆ ನಿಮ್ಮ ಒಗ್ಗರಣೆಯೇ ಕಾರಣ ಅಂತ ನಿಮ್ಮ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಕೇಸ್ ಹಾಕ್ತೀನಿ, ಹುಷಾರು...’ ಪದ್ಮಾ ಎಚ್ಚರಿಸಿ ಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT