ಶುಕ್ರವಾರ, ಫೆಬ್ರವರಿ 28, 2020
19 °C

ರಾಜ ಮತ್ತು ಸನ್ಯಾಸಿ

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಮಹಾರಾಜರು ಆಸ್ಥಾನ ಪ್ರವೇಶಿಸಿದರು. ಬಹುಪರಾಕ್‍ಗಳು ಮೊಳಗಿದವು. ‘ರಾಜಾಧಿರಾಜ, ರಾಜ ಮಾರ್ತಾಂಡ, ಅನರ್ಹ ರಕ್ಷಕ, ಬೋಪರಾಕ್...’

ಮಹಾರಾಜರು ಎಲ್ಲರತ್ತ ಕೈ ಮುಗಿದು ಒಮ್ಮೆ ರಾಜಸಭೆಯತ್ತ ಕಣ್ಣಾಡಿಸಿದರು. ‘ಏನಿವತ್ತು ಸಾಧು ಸಂತರು, ಸನ್ಯಾಸಿಗಳೇ ಹೆಚ್ಚು ಕಾಣುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಸನ್ಯಾಸಿಯೊಬ್ಬರು ಎದ್ದು ನಿಂತು ‘ಮಹಾರಾಜ, ನಮ್ಮ ಆಶ್ರಮದಲ್ಲಿ ‘ಸಕಲ ವಿದ್ಯಾ’ ಪಾರಂಗತರಾದ ಒಬ್ಬರಿದ್ದಾರೆ. ಅವರನ್ನು ತಾವು ಮಂತ್ರಿಯಾಗಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಬಂದಿದ್ದೇವೆ. ಇದು ನಮ್ಮ ಅಪ್ಪಣೆ’ ಎಂದರು.

ಮತ್ತೊಬ್ಬ ಸನ್ಯಾಸಿ ‘ಹೌದು ಮಹಾರಾಜ, ನಿಮ್ಮನ್ನು ಪಟ್ಟಕ್ಕೆ ತರುವಲ್ಲಿ ನಮ್ಮ ಶ್ರಮವೂ ಇದೆ. ನಮ್ಮ ಆಶ್ರಮದ ಒಬ್ಬರಿಗೆ ಉಪಮಂತ್ರಿ ಸ್ಥಾನ ಕಲ್ಪಿಸಿದರೆ ನಮ್ಮ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ. ಇಲ್ಲವಾದರೆ ನಿಮ್ಮ ಪಟ್ಟ ಉಳಿಯುವುದು ಕಷ್ಟವಾದೀತು’ ಎಂದು ಎಚ್ಚರಿಸಿದರು.

ಇನ್ನೊಬ್ಬ ಸ್ವಾಮಿಗಳಂತೂ ‘ರಾಜ ಸಿಂಹಾಸನವು ಮಠ ಮಾನ್ಯಗಳ ಮರ್ಜಿ. ನಮ್ಮ ಅನುಗ್ರಹ ಬೇಕೆಂದರೆ ನಮ್ಮ ಕೆಲಸಗಳನ್ನು ಮಾಡಿಕೊಡಿ, ಇಲ್ಲದಿದ್ದರೆ ಅನುಭವಿಸಿ’ ಎಂದರು.

ಸನ್ಯಾಸಿಗಳ ಮಾತು ಕೇಳುತ್ತಲೇ ಮಹಾರಾಜರು ಕಿಡಿಕಿಡಿಯಾದರು. ‘ಸಾಕು ನಿಲ್ಲಿಸಿ, ನೀವು ಧರ್ಮಬೋಧನೆ ಬಿಟ್ಟು ರಾಜಕಾರಣ ಯಾವಾಗ ಆರಂಭಿಸಿದಿರಿ? ಮಂತ್ರಿ ಸ್ಥಾನಗಳಿಗೆ ಪ್ರಭಾವ ಬೀರುವುದು ನಿಮಗೆ ಶೋಭೆ ತರದು. ನೀವು ಈ ಮಟ್ಟಕ್ಕೆ ಇಳಿಯುವುದಾದರೆ ನಾವು ಸಿಂಹಾಸನ ತ್ಯಾಗಕ್ಕೂ ಸಿದ್ಧ’ ಎಂದು ಗುಡುಗಿದರು.

‘ಸಿಂಹಾಸನ ತ್ಯಾಗ ಮಾಡಿ ಮುಂದೇನು ಮಾಡುತ್ತೀರಿ ಮಹಾರಾಜರೇ’ ರಾಜ ಪುರೋಹಿತರ ಪ್ರಶ್ನೆ.

‘ನಾನೂ ಸನ್ಯಾಸಿಯಾಗುತ್ತೇನೆ, ಆಶ್ರಮ ಕಟ್ಟುತ್ತೇನೆ. ರಾಜನಿಗಿಂತ ಸನ್ಯಾಸಿಗಳೇ ಪ್ರಭಾವಶಾಲಿಗಳು ಎಂಬುದು ನನಗೆ ಅರಿವಾಗಿದೆ...’ ಮಹಾರಾಜರ ಮಾತು ಕೇಳಿ ಇಡೀ ರಾಜಸಭೆ ಸ್ತಬ್ಧವಾಯಿತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)