ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಭೂಸ್ವರ್ಗದ ಮದುವೆಗಳು

Published 10 ಮಾರ್ಚ್ 2024, 23:37 IST
Last Updated 10 ಮಾರ್ಚ್ 2024, 23:37 IST
ಅಕ್ಷರ ಗಾತ್ರ

‘ಸುದ್ದಿ ಓದಿದ್ಯೇನು? ಉದ್ಯಮಿ ರೂಪರ್ಟ್ ಮುರ್ಡೋಕ್ ತನಗಿಂತ 25 ವರ್ಷ ಸಣ್ಣಾಕಿನ್ನ ಮದುವೆಯಾಗತಿದ್ದಾನೆ’ ಎಂದೆ.

‘ನಿಮ್ಮ ಮನುಷ್ಯ ಜಾತಿವಳಗ ಗಂಡಸು ತನಗಿಂತ 50 ವರ್ಷ ಸಣ್ಣಾಕಿನ್ನ ಮದುವೆಯಾದರೂ ಆಶ್ಚರ್ಯ ಏನಿಲ್ಲ. ಇದೇನು ಮಹಾ ಬಿಡು’ ಎಂದು ಬೆಕ್ಕಣ್ಣ ಮೂತಿ ತಿರುವಿತು.

‘ಅವನಿಗೆ 92 ವರ್ಷ ಕಣಲೇ, ಮತ್ತ ಇದು 5ನೇ ಮದುವೆಯಂತೆ’.

‘ಅಂವಾ ಅಷ್ಟು ಮುದುಕ ಆಗಿ, 5ನೇ ಲಗ್ನಕ್ಕೆ ರೆಡಿಯಾಗ್ಯಾನೆ. ಪಾಪ… ನಮ್‌ ರಾಹುಲಂಕಲ್ಲಿಗೆ 54 ಆದ್ರೂ ಇನ್ನಾ ಮೊದಲ ಕಂಕಣಭಾಗ್ಯನೇ ಕೂಡಿ ಬಂದಿಲ್ಲ’ ಎಂದು ನಿಟ್ಟುಸಿರಿಟ್ಟಿತು.

‘ಪ್ರಧಾನಿ ಆಗೂವರೆಗೆ ಲಗ್ನಾ ಮಾಡಂಗಿಲ್ಲ ಅಂತ ಅವರವ್ವ ಹೇಳಿರಬಕು’ ಎಂದೆ.

‘ಪ್ರಧಾನಿ ಆದರೆ ಲಗ್ನ ಆಗೋ ಹಂಗೇ ಇಲ್ಲ! ಪ್ರಧಾನಿಗಳು ಸಿಂಗಲ್‌ ಆಗಿರಬೇಕು ಅನ್ನೂದು ಪ್ರಧಾನಿ ಪಟ್ಟಕ್ಕೆ ಹೊಸ ಮಾನದಂಡ’ ಎಂದು ಬೆಕ್ಕಣ್ಣ ವಿವರಿಸಿತು.

‘ಅಂದರ ಪ್ರಧಾನಿ ಆಗೂದಕ್ಕೆ ಬೇಕಿರೋ ಒಂದು ಮಾನದಂಡ ಅಂವಗೈತಿ ಅಂದಂಗಾತು’.

‘ಸಿಂಗಲ್‌ ಅನ್ನೂ ಒಂದು ಮಾನದಂಡ ಸಾಲದು. ಎಲ್ಲಿ ಮಾತುಗಾರಿಕೆ ಬೇಕು, ಎಲ್ಲಿ ಏಕದಂ ಮೌನವಾಗಿರಬೇಕು, ಯಾವ ಹಕ್ಕಿಯನ್ನ ಯಾವ ಕಲ್ಲಿನಿಂದ ಹೆಂಗೆ ಹೊಡಿಬಕು ಅಂತ ನಿದ್ದೆಗಣ್ಣಲ್ಲೂ ಹೇಳೂ ಚಾಣಾಕ್ಷತನ, ಹಿಂಗೆ ಬ್ಯಾರೆ ವಿಚಾರದಾಗೆ ಪಳಗಬೇಕು…’ ಬೆಕ್ಕಣ್ಣ ಪಟ್ಟಿ ಮಾಡತೊಡಗಿತು.

‘ಹೋಗ್ಲಿಬಿಡು, ದೊಡ್ಡೋರ ವಿಚಾರ ನಮಗ್ಯಾಕೆ? ವಿಷಯಕ್ಕೆ ವಾಪಸು ಬರೂಣು. ಜೂನ್‌ವಳಗೆ ರೂಪರ್ಟ್‌ನ ಭರ್ಜರಿ ಮದುವಿಯಂತೆ. ಇತ್ತಾಗೆ ಅಂಬಾನಿ ಪುತ್ರನ ಐಷಾರಾಮಿ ಮದುವಿನೂ ಜುಲೈವಳಗಂತೆ. ಯಾರಿದ್ದು ಹೆಚ್ಚು ಭರ್ಜರಿ ಅಂತ ಸ್ಪರ್ಧೆ ಇರಬೌದು’.

‘ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತಾರಲ್ಲ, ಆದರೆ ಕೋಟ್ಯಧಿಪತಿಗಳು ಸ್ವರ್ಗವನ್ನೇ ಧರೆಗಿಳಿಸಿ ಮದುವೆ ಮಾಡತಾರೆ. ಮೊನ್ನೆ ಮೂರು ದಿನ ಅಂಬಾನಿಗಳು ಪ್ರಿವೆಡ್ಡಿಂಗ್‌ ಕಾರ್ಯಕ್ರಮ ಮಾಡಿದ್ರಲ್ಲ, ಅದು ಮುಂದಿನ ಜುಲೈ ಮದುವೆಯ ಟೀಸರ್‌… ಪಿಚ್ಚರ್‌ ಅಭಿ ಬಾಕಿ ಹೈ!’ ಬೆಕ್ಕಣ್ಣ ಹ್ಹಿಹ್ಹಿಗುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT