ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ ರಾಜಕೀಯ ವಿಡಂಬನೆ– ಸತ್ಯಮ್ಮನ ಜಂಜಾಟ

ಚುರುಮುರಿ
Last Updated 3 ಅಕ್ಟೋಬರ್ 2022, 20:01 IST
ಅಕ್ಷರ ಗಾತ್ರ

ವತ್ತರೇಗೆ ವಾಕಿಂಗ್ ಹೋಗಿಬರುವಾಗ ಯಾರೋ ‘ಲೋ ಮಗಾ ಬಯ್ಯ ಇಲ್ಲಿ!’ ಅಂತ ಕರೆದಂಗಾಯ್ತು. ತಿರುಗಿ ನೋಡಿದರೆ ಮುರಿದೋದ ಆಯುಧ ಹಿಡಕಂದು ಒಂದು ಸೊರಗಿದ ಎಣ್ಣೆಂಗ್ಸು ನಿಂತುತ್ತು. ಗುರುತಾಗಲಿಲ್ಲ!

‘ನಾನು ಸತ್ಯದೇವತೆ ಕಪ್ಪಾ. ಮರೆತೋಗಿದ್ದೀಯ? ಮರೀಲೇಬೇಕು ಬುಡೂ’ ಅಂತ ಮಾತಾಡಿಸಿದಳು.

‘ಇದ್ಯಾಕ ತಾಯಿ ಹಂಗಂದೀಯೆ! ನಾವು ಸತ್ಯಕ್ಕೋಸ್ಕರ ಬದುಕ್ತಾ ಇವಿ’ ಅಂತಂದೆ.

‘ಮಗನೇ ನನಗೂ ಸುಳ್ಳಮ್ಮನೀಗು ಪಂದ್ಯ ಬಿದ್ದದ. ‘ಎಲೆ ನನ್ನ ಸವತಿ, ರಾಜಕಾರಣಿಗಳು, ಅಧಿಕಾರಸ್ತರೆಲ್ಲಾ ಸುಳ್ಳು, ಭ್ರಷ್ಟಾಚಾರಕ್ಕೆ ಪಾಟಾಗಿ ನಿನ್ನ ಮರತೋಗ್ಯವರೆ’ ಅಂತ ಸುಳ್ಳವ್ವ ನಿಗರಾಡಕ್ಕೆ ಹತ್ತೌಳೆ. ನಾನು ಇದೇನು ಗಾಳಿಗಂಟಲು ನೋಡುಮಾ ಅಂತ ಬರುವಾಗ ದಾರಿಯಾಗೆ ಜನ ನೆರೆ ಹೊಂಟಂಗೆ ನಡಕೋಯ್ತಿದ್ರು’.

‘ಆಮೇಲೇನಾತವ್ವ?’

‘ಮುಂದಿದ್ದೋರು ನಿನ್ನಂಗೇ ‘ಯಾರವ್ವ ನೀನು?’ ಅಂತ ಕೇಳಿದ್ರಾ, ನಾನು ಈಥರಕೀತರ ಅಂತ ನನ್ನ ಕಥೆ ಹೇಳಿದೇಟಿಗೆ ಎಲ್ಲ ಬಂದು ನನ್ನ ಹಿಡಕಂದು ‘ನಾವು ಜೋಡುಸಕ್ಕೆ ಹೊಂಟಿದ್ದೀವಿ. ಈಗ ನೀನೆ ನಮ್ಮ ಅಧ್ಯಕ್ಸೆ ಆಗಬಕು’ ಅಂತ ಜುಲುಮೆ ಮಾಡಿದ್ರು. ಇನ್ನೊಂದಷ್ಟು ಜನ ಬಂದೋರು ‘ಇದು ನಮ್ಮವ್ವ ಕನ್ರೀ! ನೀವು ಯಂಗೆ ಕರಕೋದೀರಿ?’ ಅಂತ ಎಳೆದಾಡಿದ್ರು ಕಪ್ಪ’.

‘ಇದ್ಯಾಕೋ ಊರ್ಜಿತಾಯ್ತಿಲ್ಲ’.

‘ಹ್ಞೂಂ ಕಪ್ಪಾ, ಇನ್ಯಾರೋ ಬಂದು ‘ನಾವು ಮಣ್ಣಿನ ಮಕ್ಕಳು. ಸತ್ಯವೇ ನಮ್ಮವ್ವ, ಧಮ್ಮಿದ್ರೆ, ತಾಕತ್ತಿದ್ರೆ ಕರಕೋಗ್ರಿ’ ಅಂತ ಮೂರು ಗುಂಪೂ ಬೋದಾಡಕ್ಕೆ ನಿಂತುಬುಟ್ಟೋ’ ಅಂತ ನೊಂದ್ಕತ್ತು.

‘ಸರಿ ಕವ್ವಾ ಈಗ ನಾನೇನು ಮಾಡನೆ?’ ಅಂತ ಕೇಳಿದೆ.

‘ನನ್ನಪ್ಪ, ರಾಜಕೀಯದೋರಿಗೆ ಸುಳ್ಳೇ
ಮನೆ ದೇವರಾಗ್ಯದೆ. ಇವರು ನನ್ನ ಗಾವು ಥರ ಸಿಗಿಯಕ್ಕೆ ಮೊದಲು ಇಲ್ಲಿಂದ ಕರಕೋಗಪ್ಪಾ’ ಅಂತ ಗೋಗರೆಯಿತು ಸತ್ಯಮ್ಮ. ಅಷ್ಟರಲ್ಲಿ ಯಾರೋ ‘ಸತ್ಯಮ್ಮ ಇಲ್ಲಿದ್ದಂಗದಾ!’ ಅಂತಿದ್ದಂಗೇ ಸತ್ಯಮ್ಮ ಪಣ್ಣನೆ ಮಾಯವಾಗೋಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT