ಶುಕ್ರವಾರ, ನವೆಂಬರ್ 27, 2020
24 °C

ಚುರುಮುರಿ: ವಿಸ್ತರಣಾವ್ಯಾದಿ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಚಂದ್ರು ಏನೋ ಹೇಳಕೆ ಬಲೇ ಆತುರದಗಿದ್ದ. ‘ಸಾ, ಸಾ ರಾಜಾವುಲಿ ಆಪ್ತಬಣದೋರು ಸಚಿವ ಸಂಪುಟದ ವಿಸ್ತರಣೆಗೆ ಒತ್ತಡ ಹಾಕ್ತಾವರಂತೆ!’

‘ಅದೀಯೆ! ಕೆ.ಆರ್.ಪೇಟೆ, ಶಿರಾ ಗೆದ್ದುಕ್ಯಂಡು ಬಂದಿರಾ ದಾಸತ್ತುಗಾರ ಇಜಿಯಣ್ಣನಿಗೆ ಯುವರಾಜಾವುಲಿ ರಾಜ್ಯಾಭಿಸೇಕ ಮಾಡಿ ಅಂತ ಗುಮ್ಮನ್ನ ಬುಟ್ಟವರಂತೆ. ಕಮಲೇ ಕಮಲೋತ್ಪತ್ತಿಃ?’ ಯಂಟಪ್ಪಣ್ಣ ಒಗ್ರಣೆ ಹಾಕಿದರು.

‘ಮತ್ತಿನ್ನೇನ್ಲಾ, ನೆನ್ನೆ ಮೊನ್ನೆ ಬಂದೋರು ಎರಡು ಹಲ್ಲಿನ ಕರಾ ಆಡಿದಂಗೆ ಆಡ್ತಾವರೆ. ತರಗು ಗುಡ್ಸಿ ಪಕ್ಸ ಕಟ್ಟಿದ ಮೂಲನಿವಾಸಿಗಳು ಎಲ್ಲೋಗಬೇಕು?’ ತೇಟಾದ ಉತ್ತರ ಕೊಟ್ಟರು ತುರೇಮಣೆ.

‘ಥೋ, ಬರೀ ಬಂಡಾಟದ್ದೇ ಹೇಳತಾ ಕುಂತಿರತೀರಾ! ಅದಕ್ಕಿಂತಾ ಹೆಚ್ಚುಗಟ್ಲೆ ಸಮಾಚಾರ ಅದೆ. ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದವ್ರೆ. ಇದ್ಯಾಕೆ ಹಿಂಗಂದ್ರು ಅಂತಾ!’ ಎಲ್ಲರಿಗೂ
ಆಶ್ಚರ್ಯವಾಯ್ತು.

‘ಅಲ್ಲುವರಾ ಮತ್ತೆ, ಸಂಪುಟ ವಿಸ್ತರಣೇನೆ ಕಷ್ಟಾಗ್ಯದೆ ಇನ್ನು ಮರಾಠರ ಅಭಿವೃದ್ಧಿಗೆ 50 ಕೋಟಿ ನಮ್ಮದಲ್ಲ ಅಂತ ಕೊಟ್ಟಿರದು ಗುಲ್ಲಾಗ್ಯದೆ! ಅದಕೆ ಮೋದಿ ಮಾರಾಜ್ರು ಹಂಗಂದಿರಬೇಕು ಸಾ’ ನನ್ನ ಮಾತು ಹಾಕಿದೆ.

‘ಮೋದಿ ಮಾರಾಜ್ರು ವಡಪಲ್ಲೇ ಮಾತಾಡ್ತರೆ. ಇದೆಲ್ಲೀದೋ ಸುದ್ದಿ?’ ತುರೇಮಣೆ ಕೇಳಿದರು.

‘ವತ್ತರೇಗೆ ಚಿಕನ್ ಕೋಳಿ-ಮಟನ್ ಮಾಂಸ ತರುಮಾ ಅಂತ ವೋಗಿದ್ನಾ, ಅಲ್ಲಿ ಯಾರೋ ಮಾತಾಡಿಕ್ಯತಿದ್ರು’ ಅಂದ ಚಂದ್ರು.

‘ಅಯ್ಯೋ ಪಾಪ, ಮಂತ್ರಿಯಾಯ್ತಿವಿ ಅಂತ ಕಾವುಗೋಳಿ ಥರ ಕೊರಗುಟ್ಟಿಕ್ಯಂಡು ಕುಂತಿದ್ರಲ್ಲಾ ಅವರ ಕತೆ ಹ್ಯಂಗೆ!’ ತುರೇಮಣೆ ಶೋಕ ವ್ಯಕ್ತಪಡಿಸಿದರು. ನಾನು ಆ ವೇಳೆ ಈ ಸುದ್ದಿಯ ಮೂಲ ಹುಡಿಕ್ಕಂಬಂದೆ.

‘ಸಾ, ಮೋದಿ ಮಾರಾಜ್ರು ವಿಸ್ತರಣಾವಾದ ಮಾನಸಿಕ ರೋಗ ಅಂದಿರದು ದಿಟ. ಆದ್ರೆ ಅದು ಚೀನಕ್ಕೆ ಎಚ್ಚರಿಕೆ ಕೊಟ್ಟಿರದು’ ಅಂತ ಪೇಪರ್ ತೋರಿಸಿದೆ.

‘ಅಯ್ಯೋ ಬಡ್ಡಿಹೈದ್ನೆ, ಆಕಾಂಕ್ಷಿಗುಳ ಆಸೆಗೆ ಬಗನಿಗೂಟ ಮಡಗಿದ್ದಲ್ಲೋ’ ಅಂತ ಚಂದ್ರನ್ನ ಬೋದರೆ ಎಲ್ಲಾ ಗೊಳ್ಳೆನರ ಕಿತ್ಕಳಗಂಟಾ ನಗಕ್ಕೆ ಸುರು ಮಾಡಿದ್ರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.