ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಶಾಲು ವಿಲೇವಾರಿ

Last Updated 20 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಇನ್ಮೇಲೆ ಮನೆಗೆ ಸನ್ಮಾನದ ಶಾಲುಗಳನ್ನು ತರಬೇಡಿ...’ ಸಾಹಿತಿ ಗಿರಿಯವರಿಗೆ ಪತ್ನಿ ಅನು ತಾಕೀತು ಮಾಡಿದರು.

‘ಸಮಾರಂಭಗಳಲ್ಲಿ ಸಂಘಟಕರು ಗೌರವಿಸಿ, ಹೊದಿಸುವ ಶಾಲನ್ನು ಬೇಡ ಅನ್ನಬಾರದು’ ಎಂದರು ಗಿರಿ.

‘ಶಾಲುಗಳು ಕಬೋರ್ಡ್ ತುಂಬಿಹೋಗಿವೆ, ಹೊಸ ಶಾಲುಗಳಿಗೆ ಜಾಗವಿಲ್ಲ’.

‘ಶಾಲಿನ ಬದಲು ಚಿನ್ನದ ಉಂಗುರ, ಸರ ಕೊಡಿ ಅಂತ ಕೇಳಲಾಗುತ್ತಾ?’

‘ಏನನ್ನೂ ಕೇಳಬೇಡಿ, ಮನೇಲಿ ಇರುವ ಶಾಲುಗಳ ಸ್ಟಾಕ್ ಕ್ಲಿಯರ್ ಮಾಡಿ, ಸೀರೆ ಇಡಲು ಜಾಗ ಮಾಡಿಕೊಡಿ’ ಎಂದರು.

ಅಷ್ಟೊತ್ತಿಗೆ ಕನ್ನಡ ಸಂಘದವರು ಬಂದು, ‘ಕೊರೊನಾ ಕಾರಣದಿಂದ ರಾಜ್ಯೋತ್ಸವ ಆಚರಣೆ ಬದಲು, ಮನೆಗೇ ಹೋಗಿ ಸಾಹಿತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಮಾಡ್ತಿದ್ದೀವಿ’ ಎಂದು ಗಿರಿಯವರಿಗೆ ಶಾಲು ಹೊದಿಸಿದರು.

‘ಪತಿಯ ಸಾಹಿತ್ಯಕ್ಕೆ ಪ್ರೇರಣೆಯಾಗಿರುವ ನಿಮಗೂ ಗೌರವಾರ್ಪಣೆ’ ಎಂದು ಅನು ಅವರಿಗೂ ಶಾಲು ಹೊದಿಸಿ ಹೋದರು.

‘ಛೇ, ಇನ್ನೆರಡು ಶಾಲು ಸೇರ್ಪಡೆ... ಶಾಲುಗಳಿಂದ ನಿಮಗೆ ಷರ್ಟ್ ಅಥವಾ ನನಗೆ ಬ್ಲೌಸ್ ಹೊಲಿಸಲಾಗಲ್ಲ, ವೇಸ್ಟ್ ಕಣ್ರೀ...’ ಮೂಗು ಮುರಿದರು ಅನು.

‘ನಿನಗೆ ಬೇಕಿಲ್ಲದಿದ್ದರೆ ಅನಾಥರಿಗೋ ಭಿಕ್ಷುಕರಿಗೋ ಕೊಡು, ಬೆಚ್ಚಗೆ ಹೊದ್ದುಕೊಳ್ಳಲಿ’.

‘ಕೊಡಲು ಹೋಗಿದ್ದೆ, ಹಳೆ ಷರಟೋ ಸೀರೆಯನ್ನೋ ಕೊಡಿ, ಶಾಲು ಬೇಡವೇಬೇಡ ಅಂದ್ರು ಅವರು...’

ಆ ವೇಳೆಗೆ ಗೆಳತಿ ಪದ್ಮಾ, ಮಗಳ ಮದುವೆ ಇನ್ವಿಟೇಷನ್ ಕೊಡಲು ಬಂದರು. ಕುಶಲೋಪರಿ ವಿಚಾರಿಸಿದ ಅನು ನಂತರ ಪದ್ಮಾ ಅವರಿಗೆ ಶಾಲು ಹೊದಿಸಿದರು.

‘ಇದೇನ್ರೀ ಅನು, ಎಲ್ಲರೂ ಕುಂಕುಮಕ್ಕೆ ಬ್ಲೌಸ್ ಪೀಸ್ ಕೊಟ್ಟರೆ ನೀವು ಶಾಲು ಕೊಡ್ತಿದ್ದೀರಿ’ ಅಂದ್ರು ಪದ್ಮಾ.

‘ನಾನು ಕೊಡುವ ಬ್ಲೌಸ್ ಪೀಸ್ ನಿಮ್ಮ ಸೀರೆಗೆ ಮ್ಯಾಚ್ ಆಗೊಲ್ಲ, ಶಾಲು ಹೊದ್ದುಕೊಳ್ಳಿ, ಎಲ್ಲಾ ಸೀರೆಗಳಿಗೂ ಮ್ಯಾಚ್ ಆಗುತ್ತೆ...’ ಎಂದು ಹೇಳಿ ಖುಷಿಪಡಿಸಿ ಕಳಿಸಿದರು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT