ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಸಾರಿಗೆ ಸವಾರಿ

Last Updated 20 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ವಿಶಲ್ ಊದಿ ‘ಹೋಲ್ಡಾನ್...’ ಅಂದ್ರು ಸಿ.ಎಂ.

ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಸಾರಿಗೆ ಮಂತ್ರಿ, ‘ಯಾಕೆ ಸಾರ್ ಹೋಲ್ಡಾನ್ ಹೇಳಿದ್ರಿ?’ ಅಂತ ಕೇಳಿದ್ರು.

‘ಸೌಲಭ್ಯ ಸಾಲದು ಅಂತ ಸಾರಿಗೆ ಪ್ರಯಾಣಿಕರು ಬಸ್ ಇಳಿದಿದ್ದಾರೆ, ಮತ್ತೆ
ಹತ್ತುವುದಿಲ್ಲವಂತೆ...’ ಅಂದ್ರು ಸಿ.ಎಂ.

‘ಸ್ಟೇರಿಂಗ್, ಹಾರ್ನ್, ಕ್ಲಚ್ಚು, ಬ್ರೇಕು ಸರಿಯಾಗೇ ಇದೆಯಲ್ಲಾ ಸಾರ್’.

‘ಬಸ್ ಭದ್ರವಾಗಿದ್ದರೂ ಪ್ರಯಾಣಿಕರಿಗೆ ಸುಭದ್ರತೆ ಇಲ್ವಂತೆ, ಬಸ್ಸಿನಲ್ಲಿ ಉಸಿರುಕಟ್ಟುವ ವಾತಾವರಣ ಇದೆಯಂತೆ’.

‘ಕಿಟಕಿ ಗ್ಲಾಸ್ ಓಪನ್ ಮಾಡಿದ್ರೆ ಗಾಳಿ, ಬೆಳಕು ಬರುತ್ತದೆ. ಪ್ರಪಂಚದ ಪರಿಸ್ಥಿತಿ ಕಾಣುತ್ತೆ ಅಂತ ಹೇಳಿ ಸಾರ್’.

‘ಹೇಳಿದೆ, ಕೊರೊನಾ ಕಷ್ಟಕಾಲದಲ್ಲಿ ಇದಕ್ಕಿಂಥ ಹೆಚ್ಚಿನ ಸೌಕರ್ಯ ಕೊಡಲಾಗದು, ದಯವಿಟ್ಟು ಸಹಕರಿಸಿ ಅಂತ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಬಸ್ ಹತ್ತಲು ಹಟ ಮಾಡಿದ್ರೆ ಹೋದ ವರ್ಷ ಮಾಡಿದಂತೆ ಕೊರೊನಾ ನೆಪದಲ್ಲಿ ಬಸ್ ಸೇವೆಯನ್ನೇ ಬಂದ್ ಮಾಡ್ತೀವಿ ಅಂತನೂ ಹೆದರಿಸಿದೆ’.

‘ಹೆದರಿಕೊಂಡ್ರಾ ಸಾರ್?’

‘ಇಲ್ಲ, ಸರ್ಕಾರವನ್ನೇ ಪಂಚರ್ ಮಾಡ್ತೀವಿ ಅಂತ ನನ್ನನ್ನೇ ಹೆದರಿಸಿದ್ರು’.

‘ದಯವಿಟ್ಟು ಬಂದು ಬಸ್ ಹತ್ತಿ, ಬಸ್ ಚಕ್ರ ಉರುಳಿದರಷ್ಟೇ ನಮ್ಮ ಸರ್ಕಾರ, ನಿಮ್ಮ ಸಂಸಾರ ಮುಂದಕ್ಕೆ ಸಾಗೋದು’ ಮುಷ್ಕರನಿರತ ಸಾರಿಗೆ ಪ್ರಯಾಣಿಕರಿಗೆ ಸಿ.ಎಂ. ಮನವಿ ಮಾಡಿದರು.

‘ನಾವೇನು ರಾಜಹಂಸ, ಐರಾವತ, ಸುಖಾಸೀನ ಸೇವೆ ಕೇಳ್ತಿಲ್ಲ, ಸಾಧಾರಣ ಬಸ್ಸಿನ ಸುಖಕರ ಪ್ರಯಾಣ ಒದಗಿಸಿ’ ಪ್ರಯಾಣಿಕರು ಪಟ್ಟು ಹಿಡಿದರು.

ಸಿ.ಎಂ, ಸಾರಿಗೆ ಮಂತ್ರಿ ತಲೆ ಕೆಡಿಸಿಕೊಂಡರು.

‘ನಿಮ್ಮ ಸೇವಾ ಸೌಕರ್ಯಗಳನ್ನು ಟಿಕೆಟ್ ಹಿಂದೆ ಬರೆದುಕೊಡ್ತೀವಿ. ಕೊರೊನಾ ಕಾಟ ಮುಗಿದ ಮೇಲೆ ಟಿಕೆಟ್ ತೋರಿಸಿ ಈಸ್ಕೊಳ್ರಿ...’ ಎಂದು ಎಲ್ಲರಿಗೂ ಟಿಕೆಟ್ ಹಂಚಿ, ಬಸ್ ಹತ್ತಿ ‘ರೈಟ್...’ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT