ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಡಿವೋರ್ಸ್ ನ್ಯೂಸ್!

Published 13 ಜೂನ್ 2024, 23:34 IST
Last Updated 13 ಜೂನ್ 2024, 23:34 IST
ಅಕ್ಷರ ಗಾತ್ರ

‘ರೀ, ನಿಮ್ಮ ಅಭಿಪ್ರಾಯದಲ್ಲಿ ಡಿವೋರ್ಸ್‌ಗಳು ಯಾಕೆ ಆಗುತ್ವೆ?’ ಪೇಪರ್ ಓದುತ್ತಾ ಕೂತಿದ್ದ ಪರ್ಮೇಶಿನ ಪದ್ದಮ್ಮನವರು ಕೇಳಿದ್ರು.

‘ಅದಕ್ಕೆ ಇಂತದ್ದೇ ಕಾರಣ ಅಂತ ಏನೂ ಇಲ್ಲ. ಗಂಡ ನೆಲ ಒರೆಸ್ಲಿಲ್ಲ ಅಂತಾನೂ ಡಿವೋರ್ಸ್ ಆಗ್ಬಹುದು’ ಎಂದ ಪರ್ಮೇಶಿ.

‘ಅದ್ಯಾರೋ ಒಬ್ಬಾಕೆ ಗಂಡ ಗೊರಕೆ ಹೊಡೀತಾನೆ ಅಂತ ಡಿವೋರ್ಸ್ ಕೊಟ್ಟಿದ್ಲಂತೆ’.

‘ಹೆಂಡ್ತಿ ಪೊರಕೇಲಿ ಹೊಡೀತಾಳೆ ಅಂತಾನೂ ಡಿವೋರ್ಸ್ ತಗಂಡಿರೋ ಗಂಡಂದಿರಿದಾರೆ’.

‘ಒಬ್ಬಾಕೆ, ನನ್ ಗಂಡಂಗೆ ನನ್ ಮೇಲೆ ನಂಬಿಕೇನೆ ಇಲ್ಲ, ನನಗೆ ಹೇಳಿದ್ದ ತರಲೆ ತಾಪತ್ರಯನೇ ಅವನ ದಾರಿ ತಪ್ಪಿಸೋ ಬೇರೆಯವರಿಗೂ ಹೇಳ್ತಾನೆ ಅಂತ ಡಿವೋರ್ಸ್ ಕೊಟ್ಟಿದ್ಲಂತೆ. ಇನ್ನೊಬ್ಬಳು, ಮನೆಗೆ ಬಂದಾಗೆಲ್ಲಾ ಸಿಂಕಲ್ಲಿ ಪಾತ್ರೆ ಹಾಗೇ ಇರುತ್ತೆ ಅಂತ ಸಿಟ್ಕೊಂಡು ಗಂಡನ ಮೇಲೆ ಡಿವೋರ್ಸ್ ಕೇಸ್ ಹಾಕಿದ್ಲಂತೆ’.

‘ನಾನಂತೂ ಸಿನ್ಸಿಯರ‍್ರಾಗಿ ಪಾತ್ರೆ ತೊಳೆದಿರ್ತೀನಿ ಬಿಡು. ಅದಿರ್‍ಲಿ, ಅರಬ್ ಮಧುಮಗನೊಬ್ಬ ಹುಡುಗಿಗೆ ಸಿಕ್ಕಾಪಟ್ಟೆ ಮೇಕಪ್‌ ಮಾಡಿ ನನಗೆ ಮೋಸ ಮಾಡಿದ್ರು ಅಂತ ಡಿವೋರ್ಸ್ ಕೊಟ್ಟಿದ್ನಂತೆ. ನಾನೂ ಹೀಗೇ ಅಲ್ವಾ ಮಂಗ ಆಗಿದ್ದು?’

‘ಸಾಕು ಸುಮ್ನಿರ್‍ರಿ, ನೀವೇನ್ ಹೊಳೆದುಹೋಗ್ತಿದ್ರಾ? ತೈವಾನಿನ ಹೆಣ್ಣುಮಗಳೊಬ್ಳು ಗಂಡ ತನ್ ಮೆಸೇಜ್‌ಗೆ ರಿಪ್ಲೈ ಮಾಡ್ಲಿಲ್ಲ ಅಂತ ಡಿವೋರ್ಸ್ ಕೊಟ್ಟಿದಾಳೆ. ನಾನು ಹಾಗ್ ಮಾಡಿದೀನಾ? ಗಂಡ ಮನೆ ತುಂಬಾ ಆ್ಯಂಟಿಕ್ ಪೀಸ್ ತಂದಿಟ್ಕೊಂಡಿದಾನೆ ಅಂತ ಒಬ್ಬಳು ಡಿವೋರ್ಸ್ ಕೊಟ್ಟಿದ್ಲಂತೆ. ಡೊನಾಲ್ಡ್ ಟ್ರಂಪ್‌ಗೆ ತನ್ನ ಗಂಡ ವೋಟು ಹಾಕ್ದ ಅಂತ ಗೈಲ್ ಅನ್ನೋಳು ಡಿವೋರ್ಸ್ ಕೊಟ್ಟಿದ್ಲು ಗೊತ್ತಾ?’

‘ಹೌದಾ? ಆದ್ರೂ ನೀನು ಹೇಳಿದೋರಿಗೇ ವೋಟ್ ಹಾಕೋಕೆ ಹೋದೆ, ಎಣ್ಣೆ ಮೇಲಿದ್ನಲ್ಲ, ಸ್ವಲ್ಪ ಕೈ ಅಲ್ಲಾಡಿಬಿಡ್ತು ಅಂತ ಹೇಳಿ ಬಚಾವಾಗ ಬಹುದಿತ್ತು ಅಲ್ಲವೇ? ಇದೆಲ್ಲಾ ಕೇಳ್ತಿದೀಯಲ್ಲ, ನೀನೂ ಏನಾದ್ರೂ ಡಿವೋರ್ಸ್?

‘ಅಯ್ಯೋ ನಿಮಗೆ ಡಿವೋರ್ಸ್ ಕೊಟ್ಟು ಏನ್ ಪ್ರಯೋಜನ? ಆಸ್ತಿ ನನ್ ಹೆಸರಲ್ಲೇ ಇದೆ. ಹಂಗಾಗಿ ಪರಿಹಾರನೂ ಇಲ್ಲ, ನೀವು ಸ್ಟಾರೇನೂ ಅಲ್ಲ ದಿರೋದ್ರಿಂದ ಪ್ರಚಾರನೂ ಇಲ್ಲ. ವೇಸ್ಟ್ ಬಾಡಿ’ ನಕ್ಕರು ಪದ್ದಮ್ಮ. ಪರ್ಮೇಶಿ ಮುಖ ಹಿಂಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT