ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಟ್ಟ ಕಟ್ಟಿಕೊಡಿ!

Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಚಟ್ನಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದರು. ಜನರ ಮನವೊಲಿಸಲು ಅಧಿಕಾರಿ ಊರಿಗೆ ಬಂದರು.

‘ಪ್ರಜಾಪ್ರಭುತ್ವ ಗೌರವಿಸಿ ಚುನಾವಣೆಯಲ್ಲಿ ಭಾಗವಹಿಸಿ’ ಸಾಹೇಬ್ರು ವಿನಂತಿಸಿಕೊಂಡರು.

‘ನಮ್ಮೂರಿಗೆ ಮೂಲ ಸೌಕರ್ಯ ಒದಗಿಸಿಕೊಡಿ’ ಎಂದ ತಿಮ್ಮಜ್ಜ.

‘ಊರಿನ ರಸ್ತೆಗೆ ಟಾರು, ಕುಡಿಯಲು ನೀರು, ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡ್ತೀವಿ’ ಎಂದರು ಸಾಹೇಬ್ರು.

‘ಕೆರೆಕಟ್ಟೆ ಒಣಗಿವೆ, ಅಂತರ್ಜಲ ಕುಸಿದಿದೆ. ಸರ್ಕಾರದಿಂದ ನಮ್ಮೂರಿಗೊಂದು ನದಿ ಸ್ಯಾಂಕ್ಷನ್ ಮಾಡಿಸಿ’ ಪರಮೇಶಿ ಒತ್ತಾಯಿಸಿದ.

‘ನದಿ ಕೊಡೋಕೆ ಸರ್ಕಾರ ಭಗೀರಥನಲ್ಲ, ಬೇಕಾದ್ರೆ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಮಾಡ್ತೀವಿ...’ ಸಾಹೇಬ್ರು ಸಿಟ್ಟಾದರು.

‘ನಮ್ಮೂರಲ್ಲಿ ಮುತ್ತಾತನ ಕಾಲದಲ್ಲಿ ನದಿ ಹರಿಯುತ್ತಿತ್ತಂತೆ. ಆ ನದಿ ಪಾತ್ರದ ಮರಳನ್ನು ಲೂಟಿ ಮಾಡಲಾಗಿದೆ, ನದಿ ನಾಶವಾಗಿದೆ’.

‘ಆಯ್ತು, ಮರಳು ದಂಧೆಗೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ತೀವಿ’.

‘ಬೆಟ್ಟದ ದೇವರ ಶಾಪದಿಂದ ಊರಿಗೆ ಬರ ಬಂದಿದೆ...’ ತಿಮ್ಮಜ್ಜ ನಿಟ್ಟುಸಿರುಬಿಟ್ಟ.

‘ದೇವರ ಪೂಜೆ, ಉತ್ಸವ ಮಾಡಿ ಶಾಪ ವಿಮೋಚನೆ ಮಾಡಿಕೊಳ್ಳಿ’ ಸಾಹೇಬ್ರು ಸಲಹೆ ಕೊಟ್ಟರು.

‘ದೇವರೂ ಇಲ್ಲ, ಬೆಟ್ಟವೂ ಇಲ್ಲ. ಕಲ್ಲು ಗಣಿಗಾರಿಕೆಯವರು ಬೆಟ್ಟದ ಮೇಲಿದ್ದ ದೇವಸ್ಥಾನ ಕೆಡವಿ, ಬೆಟ್ಟವನ್ನು ಒಡೆದು ಗುರುತಿಲ್ಲದಂತೆ ಮಾಡಿದ್ದಾರೆ’ ಸೀನ ಸಂಕಟಪಟ್ಟ.

‘ಸರ್ಕಾರ ನಮ್ಮೂರಲ್ಲಿ ಒಂದು ಬೆಟ್ಟ ನಿರ್ಮಾಣ ಮಾಡಬೇಕು’ ಗೋವಿಂದ ಆಗ್ರಹಿಸಿದ.

‘ತಮಾಷೆ ಮಾಡ್ತಿದ್ದೀರಾ? ಬೆಟ್ಟವನ್ನು ಕಟ್ಟಿಕೊಡಲಾಗುತ್ತೇನ್ರೀ?’ ಸಾಹೇಬ್ರು ನಕ್ಕರು.

‘ನಗಬೇಡಿ ಸಾಹೇಬ್ರೇ, ನಾವೇನು ವಿಧಾನಸೌಧ ಕಟ್ಟಿ ಅಂತ ಕೇಳಲಿಲ್ಲ, ಊರಲ್ಲಿ ಇದ್ದ ಬೆಟ್ಟವನ್ನು ನಾಶ ಮಾಡಲಾಗಿದೆ, ಅದನ್ನು ಪುನರ್‌ನಿರ್ಮಾಣ ಮಾಡಿ’ ಸಿದ್ಧನಂಜ ರೇಗಿದ.

ಸಾಹೇಬ್ರಿಗೆ ಉತ್ತರ ಹೊರಡಲಿಲ್ಲ, ‘ಸರಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರ್ತೀನಿ...’ ಎಂದು ಹೇಳಿ ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT