ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪುರಾಣ, ಪುಣ್ಯಕಥೆ!

Last Updated 9 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

‘ಪಮ್ಮಿ, ಏನೇ ಇದೂ... ತಿಂಡಿ ಅಂದ್ರೆ ಬರೀ ಉಪ್ಪಿಟ್ಟು ಇಲ್ಲ ಚಿತ್ರಾನ್ನನಾ? ಈ ಎರಡು ಬಿಟ್ರೆ ನಿಂಗೆ ಬೇರೆ ಮಾಡಾಕೆ ಬರಲ್ವ?’ ಟಿ.ವಿ ಪತ್ರಕರ್ತ ತೆಪರೇಸಿ ಹೆಂಡ್ತಿ ಮೇಲೆ ರೇಗಿದ.

ಪಮ್ಮಿಗೂ ಸಿಟ್ಟು ಬಂತು, ‘ಸುಮ್ನೆ ತಿಂದು ಎದ್ದೋಗಿ. ನೀವು ಇಡೀ ದಿನ ಟೀವಿಲಿ ಒಂದು ಸೀಡಿ, ಇನ್ನೊಂದು ಕೊರೊನಾ ಎರಡ್ನೇ ಕುಯ್ತಿರ್ತೀರಾ? ನಾವೂ ಸುಮ್ನೆ ನೋಡಲ್ವ?’ ಎಂದಳು.

ಯಾಕೋ ಕೇಸು ಉಲ್ಟಾ ಹೊಡೀತೈತೆ ಅಂದುಕೊಂಡ ತೆಪರೇಸಿ ‘ನಾವೆಂಗಾರ ಕುಯ್ತೀವಿ, ನೀವ್ಯಾಕೆ ಟೀವಿ ನೋಡ್ತೀರಿ? ಬಿಟ್ರಾಯ್ತಪ್ಪ...’ ಎಂದ.

‘ನಾವು ಟೀವಿ ನೋಡದಿದ್ರೆ ನಿಮ್ಮ ಹೊಟ್ಟೆಪಾಡು ನಡೀಬೇಕಲ್ಲ... ನಾವು ಟೀವಿ ನೋಡೋದ್ರಿಂದಾನೇ ನಿಮ್ಮ ಟಿಆರ್‌ಪಿ ಹೆಚ್ಚೋದು, ನಿಮ್ ಟೀವಿ ನಡಿಯೋದು’.

ಕರೆಕ್ಟಾಗಿ ಏಟು ಹಾಕ್ತದಾಳಲ್ಲ ಎಂದು ಯೋಚಿಸಿದ ತೆಪರೇಸಿ ‘ನಿಮ್ಮಿಂದ ನಮ್ ಟೀವಿ ನಡೀಬಹುದು, ಆದ್ರೆ ನಮ್ಮಿಂದ ಇಡೀ ಸರ್ಕಾರನೇ ನಡೀತೈತಿ ಗೊತ್ತಾ?’ ಅಂದ.

‘ನಿಮ್ಮಂಥ ಕುಡುಕರು ಕೊಡೋ ಟ್ಯಾಕ್ಸ್‌ನಿಂದ ಸರ್ಕಾರ ನಡೀತೈತಿ ಅಂತಾನಾ? ಇದು ಹಳೆ ಡೈಲಾಗು. ಇಡೀ ದಿನ ಎರಡನೇ ಅಲೆ, ಮೂರನೇ ಅಲೆ ಅಂತ ತೋರ್ಸಿದ್ದೇ ತೋರ್ಸಿ ನಮ್ಮ ಬಿ.ಪಿ. ಏರಿಸೋ ಬದ್ಲು ನಿಮ್ ಟೀವಿಲಿ ಒಳ್ಳೆ ಕಾರ್ಯಕ್ರಮ ತೋರ್ಸಿ’ ಪಮ್ಮಿ ಸವಾಲು ಹಾಕಿದಳು.

‘ನೀವು ಈಟುದ್ದ ಇರೋದ್ನ ಆಟುದ್ದ ತೋರ್ಸೋ ಧಾರಾವಾಹಿಗಳ್ನ ಬಾಯಿ ಬಿಟ್ಕಂಡ್ ನೋಡ್ತಾ ಕೂತಿರ್ತೀರಾ? ಅದನ್ನ ಬಿಡಿ ಮೊದ್ಲು’ ತೆಪರೇಸಿನೂ ಬಿಡಲಿಲ್ಲ.

‘ಆಯ್ತು ಆಯ್ತು, ಸದ್ಯ ಗೌರ್ಮೆಂಟ್ ಬಸ್ ನೌಕರರಿಗೆ ಒಂದು ಥ್ಯಾಂಕ್ಸ್ ಹೇಳಬೇಕು, ಸ್ಟ್ರೈಕ್ ಮಾಡಿದ್ದಕ್ಕೆ...’

‘ಯಾಕೆ?’

‘ನಿಮ್ಮ ಸೀಡಿ ಪುರಾಣ, ಕೊರೊನಾ ಪುಣ್ಯಕತೆಗಳನ್ನ ಸ್ವಲ್ಪ ದಿನನಾದ್ರು ಟೀವಿಯಿಂದ ಓಡಿಸಿದ್ದಕ್ಕೆ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT