ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮುಗಿದ ಅಧ್ಯಾಯ

Last Updated 20 ಮಾರ್ಚ್ 2022, 19:31 IST
ಅಕ್ಷರ ಗಾತ್ರ

‘ನಾ ಇಲ್ಲಿರೂ ಬದಲಿಗೆ, ವಿಜಯಪುರದ ಆ ಜಿಲ್ಲಾ ನಿರ್ಮಿತಿ ಕೇಂದ್ರದ ಮ್ಯಾನೇಜರ್ ಮನ್ಯಾಗರ ಹುಟ್ಟಬೇಕಿತ್ತು’ ಬೆಕ್ಕಣ್ಣ ನಿಟ್ಟುಸಿರುಬಿಟ್ಟಿತು.

ಯಾಕೆಂದು ತಿಳಿಯದೇ ನಾನು ಕಕಮಕ ಮುಖಮಾಡಿದೆ.

‘ನೋಡು... ಎಂಥಾ ಚಂದದ ಎಷ್ಟ್ ದೊಡ್ಡ ಮನಿ... ವಿದೇಶದಿಂದ ಸ್ಟೀಮ್ ಬಾತ್‌ಟಬ್ ತರಿಸಿ ಹಾಕ್ಯಾರಂತ... ಅಲ್ಲಿದ್ದಿದ್ದರೆ ನಾನೂ ಅಷ್ಟು ಚಂದದ ಟಬ್ಬಿನಾಗ ಸ್ಟೀಮ್ ಬಾತ್ ಮಾಡತಿದ್ದೆ. ಇಷ್ಟೆಲ್ಲ ದೊಡ್ ಮನಿ ಕಟ್ಟಬೇಕಂದ್ರ ಹಗಲೂ ರಾತ್ರಿ ಎಷ್ಟರ ಕಷ್ಟಪಟ್ಟು ದುಡಿದಿರಬಕು, ಹೌದಿಲ್ಲೋ’ ಎಂದಿತು.

‘ಹ್ಞೂಂ... ರಗಡ್ ಕಷ್ಟಪಟ್ಟಿರತಾರ. ಎಲ್ಲೆಲ್ಲಿಂದ ಹೆಂಗ ರೊಕ್ಕ ಗುಳುಂ ಮಾಡಬಕು, ಆಮೇಲದನ್ನು ಹೆಂಗ ದಕ್ಕಿಸಿಕೊಳ್ಳಬಕು ಅಂತೆಲ್ಲ ತೆಲಿ ಓಡಿಸಿ, ಭಾನಗಡಿ ಮಾಡೂದು ಸರಳ ಅಂತ ಮಾಡೀಯೇನ್’ ನಾನೂ ಮರುಕದಿಂದ ಹೇಳಿದೆ.

ಎಸಿಬಿ ಇನ್ನೂ ಎಲ್ಲೆಲ್ಲಿ ದಾಳಿ ನಡೆಸಿ, ಯಾವ್ಯಾವ ಅಧಿಕಾರಿಗಳ ಅಕ್ರಮ ಆಸ್ತಿ ಜಪ್ತಿ ಮಾಡಿತು ಎಂಬುದನ್ನೆಲ್ಲ ಓದಿದ ಬೆಕ್ಕಣ್ಣ, ‘ಈ ಗುಳುಂಕೋರ ಅಧಿಕಾರಿಗಳನ್ನ, ಅವರ ಅಕ್ರಮ ಆಸ್ತಿಯನ್ನ ಏನು ಮಾಡತಾರ?’ ಎಂದು ಅಮಾಯಕನಂತೆ ಕೇಳಿತು.

‘ಮಾಡೂದೇನಲೇ... ಬ್ಯಾರೆ ಕಡಿಗೆ ವರ್ಗ ಮಾಡತಾರ. ಅವರೂ ರೊಕ್ಕ ಗುಳುಂ ಮಾಡಾಕೆ ಹೊಸ ದಾರಿ ಕಂಡುಹಿಡಿತಾರ. ಅಲ್ಲಿಗೆ ಚಾಪ್ಟರ್ ಕ್ಲೋಸ್’.

‘ಸರಿ ಬಿಡು... ಈ ಸುದ್ದಿ ಮುಗಿದ ಅಧ್ಯಾಯ’ ಎನ್ನುತ್ತ ಪೇಪರು ಬಿಸಾಕಿ ಗೇಟಿನ ಬಳಿ ಓಡಿತು. ಪಕ್ಕದ ಮನೆಯ ಚಿಂಟೂ ಸಿಂಗ್ ತನ್ನ ಪಗಡಿ ಸರಿಮಾಡಿಕೊಳ್ಳುತ್ತ ಸ್ಕೂಲಿನ ವ್ಯಾನಿಗೆ ಕಾಯುತ್ತಿದ್ದನ್ನು ನೋಡಿತು.

‘ಏ... ತೆಲಿಮ್ಯಾಗೆ ಏನೂ ಹಾಕಬಾರದಂತ ಆರ್ಡರು ಆಗ್ಯದಂತೆ’ ಎಂದು ಉಪದೇಶ ಶುರುಮಾಡಿತು.

‘ಹೋಗಲೇ... ಅದ್ ಹೆಣ್‌ಮಕ್ಕಳು ಹಾಕೂ ಹಿಜಾಬಿಗೆ... ನಮಗಲ್ಲ...’ ಎಂದು ಚಿಂಟೂ ಜೋರಾಗಿ ಬೆದರಿಸಿದ್ದೇ ಬೆಕ್ಕಣ್ಣ ಬಾಲ ಮುದುರಿ ಕೊಂಡು ‘ಈ ಸುದ್ದಿನೂ ಮುಗಿದ ಅಧ್ಯಾಯ’ ಎಂದು ಗೊಣಗುತ್ತ ಒಳಗೋಡಿ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT