ಬುಧವಾರ, ಸೆಪ್ಟೆಂಬರ್ 22, 2021
21 °C

ಚುರುಮುರಿ: ಗೊಂಬೆ ಆಡ್ಸೋನು!

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಸಾರ್ ತಮಗೆ ಅಭಿನಂದನೆಗಳು. ‘ತುರಿಕೆ’ ಪತ್ರಿಕೆಯ ಸಂದರ್ಶನಕ್ಕೆ ಸ್ವಾಗತ. ರಾಜ್ಯದ ಪರಿಸ್ಥಿತಿ ಉತ್ತಮಗೊಳಿಸೋಕೆ ತಮ್ಮ ಮುಂದಿನ ಯೋಜನೆಗಳೇನು?’

‘ನಾನು ವರಿಷ್ಠರ ಜೊತೆಗೆ ಸಮಾಲೋಚನೆ ಮಾಡಿ ನಿಮಗೆ ತಿಳಿಸ್ತೀನಿ!’

‘ಇನ್ನೂ ಸಂಪುಟ ರಚನೆ ಆಗಿಲ್ಲ. ಏನು ಕಾರಣ ಸಾರ್?’

‘ಮಂತ್ರಿ ಪದವಿಗೆ ಒಳ್ಳೆ ವೇಟ್ ಇರೋರು ಬೇಕು ಅಂತ ವರಿಷ್ಠರು ಹೇಳಿರೋದ್ರಿಂದ ಎಲ್ಲಾರೂ ಡೆಲ್ಲೀಲಿ ವೇಟ್ ಚೆಕ್ ಮಾಡಿಸ್ತಿದ್ದಾರೆ. ಜಾಸ್ತಿ ವೇಟ್ ಇರೋರು ಅಪಾಯಿಂಟ್ ಆಗಿ ಬರ್ತರೆ ತಡೀರಿ!’

‘ಸದಾನಂದ, ಶೆಟ್ಟರಾದ ಮೇಲೆ ನೀವೇ ಮೂರನೇ ಅಲೆಯಂತೆ?’

‘ಒಬ್ಬರು ರೆಸ್ಟಲ್ಲವರೆ, ಇನ್ನೊಬ್ರು ಸಂಪುಟಕ್ಕೆ ಬರಲ್ಲ ಅಂದವ್ರೆ! ಅವರೂ ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಮೂರನೇ ಅಲೆ ಭಾಳ ಪವರ್‌ಫುಲ್‌ ಕಣ್ರೀ’

‘ಮೊನ್ನೆ ಇಬ್ಬರು ಮಾಜಿ ಮಂತ್ರಿಗಳು ತಾರಾಮಾರ ಬೈದಾಡಿಕೊಂಡಿದಾರಂತೆ!’

‘ಅವರಿಬ್ಬರ ಹೆಸರಲ್ಲೂ ಸೋ, ಶೋ ಇದೆ. ಸೋ ಅಧಿಕಾರಕ್ಕಾಗಿ ಶೋ ಮಸ್ಟ್ ಗೋ ಆನ್! ಸುಮ್ನೆ ಮಜಾ ನೋಡಿ’.

‘ದೇವೇಗೌಡರನ್ನ ಭೇಟಿ ಮಾಡಿದ್ರಂತೆ?’

‘ಅವರು ನಮ್ಮ ಪಿತಾಮಹರು. ಅದು ನಮ್ಮ ತವರುಮನೆ ಇದ್ದಂಗೆ! ಪವರ್ ಉಳಿಸಿಕಳಕ್ಕೆ ಅವಸರಕ್ಕೊಬ್ಬಣ್ಣ ಬೇಕಾಯ್ತನೆ’.

‘ಗಣಿ ದೂಳು ಎಲ್ಲಾ ಕಡೆ ತುಂಬಿಕೊಂಡದಲ್ಲಾ ಸಾರ್. ನಿಮ್ಮ ಯೋಜನೆ ಏನು?’

‘ಗಣಿ ಕೊರೆಯೋ ಕಳ್ಳ ಅಪ್ಪಿಲಿ, ಅವ್ವಿಲಿ, ಸಣ್ಣಿಲಿ, ದೊಡ್ಡಿಲಿಗಳಿಗೆ ಸಮಯ ಸಂದರ್ಭ ನೋಡಿಕಂಡು ಇಲಿ ಪಾಷಾಣ ಹಾಕ್ತೀವಿ! ಒಳ್ಳೆ ಇಲಿಗಳೆಲ್ಲಾ ಕಿಂದರಿಜೋಗಿ ಹಿಂದೆ ಬಂದಂಗೆ ನನ್ನಿಂದೆ ಬರ್ತವೆ’.

‘ಕರ್ನಾಟಕದ ರಾಜಕೀಯದಲ್ಲಿ ಶುರುವಾಗಿರೋ ಕಾವಿ ಬ್ರಿಗೇಡ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?’

‘ಇದು ಕರ್ನಾಟಕದಲ್ಲಿ ಉತ್ತರಪ್ರದೇಶದ ಥರವೇ ಆರಂಭ ಆಗಿರೋ ಮಾರ್ಮಿಕ ಕಾವಿ ಕ್ರಾಂತಿ. ನನ್ನನ್ನ ಅವರು ಒಪ್ಪಿಕೊಂಡು ಭಾಳ ಪ್ರಬುದ್ಧತೆ, ಬುದ್ಧಿವಂತಿಕೆ ತೋರಿಸವ್ರೆ! ಅವರ ಮಾತೇ ಶಾಸನ!’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.