ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನವರಿಕೆ ಕಥೆ!

Last Updated 23 ಏಪ್ರಿಲ್ 2021, 18:15 IST
ಅಕ್ಷರ ಗಾತ್ರ

‘ಲೇ ತೆಪರ, ನಿನ್ನಿ ಯಾಕಲೆ ಮನಿ ಹೊರಗೆ ಕಟ್ಟಿಮ್ಯಾಲ ಮಲಗಿದ್ದಿ? ಪಮ್ಮಕ್ಕ ಚಾಪಿ ದಿಂಬು ಹೊರಗಾಕಿದ್ಲೇನು?’ ಗುಡ್ಡೆ ನಗುತ್ತಾ ವಿಚಾರಿಸಿದ.

‘ಅದೂ... ಹಂಗಲ್ಲಲೆ, ರಾತ್ರಿ ಮಲಗಿದ್ದಾಗ ನಾನು ಲಾಕ್‍ಡೌನು, ಕರ್ಫ್ಯೂ, ಆಕ್ಸಿಜನ್ನು, ವೆಂಟಿಲೇಟ್ರು, ಬೆಡ್ಡು ಅಂತೆಲ್ಲ ಒಂದೇ ಸಮ ಕನವರಿಸ್ತಿದ್ನೆಂತೆ. ನಿದ್ದಿ ಹಾಳಾತು ಅಂತ ಪಮ್ಮಿ ಸಿಟ್ಟಿಗೆದ್ದಿದ್ಲು...’

‘ಗೊತ್ತಾತು ಬಿಡು, ಮೊದ್ಲೇ ಟಿ.ವಿ ರಿಪೋಟ್ರು ನೀನು. ಹಗಲು ಕ್ಯಾಮೆರಾ ಮುಂದೆ ಒದರ್ತಿ, ರಾತ್ರಿ ಹಾಸಿಗೆ ಮ್ಯಾಲ... ನಿಂದಿರ‍್ಲಿ, ನನ್ ಹೆಂಡ್ತಿ ಕತಿ ಇನ್ನೂ ದೊಡ್ಡದು. ರಾತ್ರಿ ಎಲ್ಲ ನಿದ್ಯಾಗ ನಾಗಿಣಿ, ನಾಗಕನ್ಯೆ, ನಾಗಭೈರವಿ, ನಾಗಮತ್ಸರ ಅಂತ ಕನವರಿಸ್ತಿರ್ತಾಳ. ಹಾಸಿಗೆ ತುಂಬ ಬರೀ ಧಾರಾವಾಹಿ ಹಾವುಗಳೇ...’ ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಆಗ ದುಬ್ಬೀರ ‘ನಿಮ್ದು ಹಂಗಿರ‍್ಲಿ, ನನ್ ಸಣ್ಣ ಮಗ ಬರೀ ಐಪಿಎಲ್ ಕ್ರಿಕೆಟ್ ನೋಡ್ತಾನ. ರಾತ್ರಿ ಎಲ್ಲ ಸಿಕ್ಸು, ಫೋರು, ನೋಬಾಲು ಅಂತ ಕನವರಿಸ್ತಾನ. ಮೊನ್ನೆ ರಾತ್ರಿ ‘ಫ್ರೀ ಹಿಟ್’ ಅಂತ ಜಾಡ್ಸಿ ಒದ್ನಪ. ಅವತ್ತಿಂದ ಅವನ್ನ ಬ್ಯಾರೆ ಮಲಗಿಸ್ತಿದೀವಿ’ ಎಂದ.

‘ಒಳ್ಳೆ ಕತಿ, ಸ್ವಲ್ಪ ದಿನ ನಮ್ ಗುಡ್ಡೆ ಕನಸಿನಾಗೆ ಬರೀ ಸೀಡಿ ಓಡಾಡ್ತಿದ್ದವು ಗೊತ್ತಾ?’ ಎಂದ ಕೊಟ್ರೇಶಿ ನಗುತ್ತ.

‘ಸೀಡಿನಾ? ಯಾವ ಸೀಡಿ? ಎಲ್ಲ ಮರೆತೇ ಹೋಗೇತಪ...’ ಗುಡ್ಡೆಗೂ ನಗು...

‘ನಿಮಗೆ ಗೊತ್ತಾ? ನಮ್ಮ ಸಣ್ಣೀರನ ಕನಸಿನಾಗೆ ದಿನಾ ಶಿವ ಪ್ರತ್ಯಕ್ಷ ಆಗ್ತದಾನಂತೆ’, ತೆಪರೇಸಿ ಹೊಸ ವಿಷಯ ಪ್ರಸ್ತಾಪಿಸಿದ.

‘ಏನು? ಶಿವಾನ? ಸಣ್ಣೀರನ ಕನಸಿಗಾ? ಏನದು ಬಿಡಿಸಿ ಹೇಳಲೆ’ ದುಬ್ಬೀರನಿಗೆ ಕುತೂಹಲ.

‘ಶಿವ ಅಂದ್ರೆ ಶಿವಪರಮಾತ್ಮ ಅಲ್ಲ, ಬಿಡದಿ ಡೈಲಿ ಆನಂದ ಸ್ವಯಂಘೋಷಿತ ಶಿವ. ಅಲ್ಲೆಲ್ಲೋ ‘ಕೈಲಾಸ’ ಅಂತ ದೇಶ ಕಟ್ಟಿದಾನಂತಲ್ಲ. ಅಲ್ಲಿ ಕೊರೊನಾ ಇಲ್ಲಂತೆ. ಕನಸಿನಾಗೆ ಇವ್ನು ಅವನ ಕೈಲಾಸಕ್ಕೆ ಬರ್ತೀನಿ ಅಂತಾನಂತೆ, ಅವ್ನು ಬ್ಯಾಡ ಅಂತಾನಂತೆ. ಸುಮ್ನೆ ಸಣ್ಣೀರನ್ನ ನಮ್ಮ ಒರಿಜಿನಲ್ ಕೈಲಾಸಕ್ಕೆ ಕಳಿಸಿದ್ರೆ ಹೆಂಗೆ?’ ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT