ಸೋಮವಾರ, ಸೆಪ್ಟೆಂಬರ್ 26, 2022
22 °C

ಚುರುಮುರಿ| ತೇಲೋದಕ್ಕೆ ತರಬೇತಿ!

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಬೆಳಬೆಳಿಗ್ಗೆ ಮನೆಯ ಕಾಲಿಂಗ್ ಬೆಲ್ ಸದ್ದಾಯಿತು. ಬಾಗಿಲು ತೆರೆದರೆ ಗುಡ್ಡೆ! ಜೊತೆಗಿಬ್ಬರು ಚೇಲಾಗಳು. ‘ಏನೋ ಗುಡ್ಡೆ ಬೆಳಬೆಳಿಗ್ಗೆ ಸವಾರಿ? ಏನದು ಕೈಯಲ್ಲಿ...’ ಎಂದೆ.

‘ಇದಾ... ಅಪ್ಲಿಕೇಶನ್ ಫಾರ್ಮು, ನಮ್ ಬಡಾವಣೆ ಜನರಿಗೆಲ್ಲ ವಾಟರ್ ಸೇಫ್ಟಿ ಟ್ರೇನಿಂಗ್ ಕೊಡ್ತಾ ಇದೀವಿ...’ ಎಂದ ಗುಡ್ಡೆ.

‘ಓ... ದುಡ್ಡೆತ್ತಕೆ ಹೊಸ ಸ್ಕೀಮಾ? ಏನೇನ್ ಟ್ರೇನಿಂಗ್ ಕೊಡ್ತೀರಪ್ಪ?’

‘ಮಳೆ ನೀರಲ್ಲಿ ಹೆಂಗೆ ತೇಲಬೇಕು, ಹಾವು, ಚೇಳುಗಳಿಂದ ಹೇಗೆ ತಪ್ಪಿಸ್ಕಾಬೇಕು, ಒಂದು ಮ್ಯಾನ್‌ಹೋಲ್‌ಗೆ ಬಿದ್ರೆ ಇನ್ನೊಂದು ಮ್ಯಾನ್‌
ಹೋಲ್‌ನಲ್ಲಿ ಹೆಂಗೆ ಏಳಬೇಕು, ರೋಡಲ್ಲೂ ಹೆಂಗೆ ಬೋಟ್ ನಡೆಸಬೇಕು ಅಂತೆಲ್ಲ ಟ್ರೇನಿಂಗ್ ಕೊಡ್ತೀವಿ’.

‘ಬೋಟೂ ಇಲ್ಲ, ಈಜೂ ಬರಲ್ಲ ಅಂಥೋರಿಗೆ ಏನು ಮಾಡ್ತೀರಲೆ?’

‘ಹೆದರಬೇಡಿ, ಧೈರ್ಯವಾಗಿ ಕೈ ಕಾಲು ಆಡಿಸಿ, ಯಾವುದಾದ್ರೂ ದಡ ಸೇರ್ಕಂತೀರಿ ಅಂತ ಧೈರ್ಯ ತುಂಬೋ ಕೆಲ್ಸ ಮಾಡ್ತೀವಿ...’

‘ನಿನ್ತೆಲಿ, ಅದಕ್ಕಿಂತ ಒಂದು ಹೆಲಿಕಾಪ್ಟರ್ ಬಾಡಿಗೆಗೆ ತಗಂಡು ಮಳೇಲಿ ಸಿಕ್ಕಾಕಂಡೋರ್ನ ಏರ್‌ಲಿಫ್ಟ್ ಮಾಡು, ಒಳ್ಳೆ ರೊಕ್ಕಾಗ್ತವು...’

‘ಲೇ ತೆಪರ, ಮಳೇಲಿ ಹೆಲಿಕಾಪ್ಟರ್ ಎಲ್ಲಿ ಹಾರ್ತಾವಲೆ, ಜಲ್ದಿ ರೊಕ್ಕ ತೆಗಿ. ನಿಂದು ಪಮ್ಮಕ್ಕಂದು ಸೇರಿ ಸಾವಿರ ರೂಪಾಯಿ... ಎಲ್ಲಿ ಪಮ್ಮಕ್ಕ?’ ಗುಡ್ಡೆ ಕೇಳಿದ.

‘ಬರ್ತಾ ಇದೀನಿ, ಕಾಫಿ ತರ್ತಾ ಇದೀನಿ...’ ಎನ್ನುತ್ತಾ ಅಡುಗೆ ಮನೆಯಿಂದ ಹೊರಬಂದ ಪಮ್ಮಿ ‘ಅಲ್ಲಪ್ಪ ಗುಡ್ಡೆ, ಈ ಮಳೆ ಪ್ರವಾಹದಿಂದ ಬಚಾವಾಗೋಕೆ ಸ್ವಿಮ್ಮಿಂಗ್ ಸೂಟು, ಜಾಕೆಟ್ಟು ಆ ತರದೋವು ಏನಾದ್ರು ಕೊಟ್ರೆ ಯೂಸ್ ಆಗುತ್ತಪ್ಪ...’ ಎಂದಳು.

‘ಬರೋ ದಿನದಲ್ಲಿ ಅದೆಲ್ಲ ಕೊಡ್ತೀವಿ ಪಮ್ಮಕ್ಕ, ಮಳೇಲಿ ಸಿಕ್ಕಾಕೊಂಡೋರು, ಚರಂಡಿಗೆ ಬಿದ್ದೋರು ಎಲ್ಲದಾರೆ ಅನ್ನದನ್ನ ಪತ್ತೆ ಹಚ್ಚಾಕೆ ಎಲ್ರಿಗೂ ಒಂದೊಂದ್ ಮಿಶಿನ್ ಫಿಕ್ಸ್ ಮಾಡ್ತೀವಿ...’

‘ಹೌದಾ? ವಂಡರ್‌ಫುಲ್... ಹಂಗೇ ನೀರಲ್ಲಿದ್ರೂ ಬಾರಲ್ಲಿದ್ರೂ ಸೀದಾ ಮನೇಗೇ ತೇಲ್ಕಂಡು ಬರೋ ತರ ಯಾವುದಾದ್ರು ಆಟಮೆಟಿಕ್ ಮಿಶಿನ್ ಇದ್ರೆ ತಂದುಕೊಡಪ್ಪ...’ ಎಂದಳು ತೆಪರೇಸಿ ಕಡೆ ನೋಡುತ್ತ. ತೆಪರೇಸಿ ಪಿಟಿಕ್ಕನ್ನಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು