ಸೋಮವಾರ, ಆಗಸ್ಟ್ 8, 2022
25 °C

ಚುರುಮುರಿ: ಶಿವ ಬದಲು ಶಿಂಧೆ?

ಆನಂದ Updated:

ಅಕ್ಷರ ಗಾತ್ರ : | |

‘ಇನ್‍ಡಿಸ್ಪೆನ್ಸಬಲ್ ಅಂದರೆ ಏನು?’ ಎಂದು ಹೆಂಡತಿ ಕೇಳಿದಳು. ನಾನು ಯೋಚಿಸಿ, ‘ನಾನು ನಿನಗೆ ಏನೂ ಇಲ್ಲದಿರಬಹುದು, ಆದರೆ ನೀನು ನನಗೆ ಇನ್‍ಡಿಸ್ಪೆನ್ಸಬಲ್’ ಎಂದೆ.

‘ಅರ್ಥವಾಯಿತು ಬಿಡಿ’ ಎಂದಾಗ ‘ಈ ಪ್ರಶ್ನೆ ಯಾಕೀಗ?’ ಎಂದೆ.

‘ಅದೇರಿ, ಠಾಕ್ರೆ ಕುಟುಂಬ ಇಲ್ಲದೆ ಶಿವಸೇನೆ ಇರಲು ಸಾಧ್ಯವೇ?’ ಎಂದು ಕೇಳಿದಳು.

‘ಹೋ! ಶಿವಸೇನೆಗೆ ಆ ಕುಟುಂಬ ಇನ್‌ಡಿಸ್ಪೆನ್ಸಬಲ್ ಅಂತ ತಾನೆ ನೀನು ಹೇಳ್ತಿರೋದು ಅಥವಾ ಕೇಳ್ತಿರೋದು?’

‘ಹೌದು, ಶಿವಸೇನೆ ಅಂದರೆ ಬಾಳಾಸಾಹೇಬ ಠಾಕ್ರೆ, ಠಾಕ್ರೆ ಎಂದರೆ ಶಿವಸೇನೆ ಅಂತ ಇರುವಾಗ ಈಗ ಅದು ಶಿಂಧೆಸೇನೆ ಆಗಲಿಕ್ಕೆ ಹೊರಟಿದೆ. ಆದ್ದರಿಂದ ಏಕ್‍ನಾಥ್ ಶಿಂಧೆ ಅವರು ಠಾಕ್ರೆ ಕುಟುಂಬಾನ ಡೈವೋರ್ಸ್ ಮಾಡಲು ಸಾಧ್ಯವೇ?’

‘ಗುಡ್ ಕ್ವೆಶ್ಚನ್, ಬಟ್ ದೇರ್ ಈಸ್ ನೊ ಗುಡ್ ಆನ್ಸರ್’ ಎಂದು ಒಪ್ಪಿಕೊಂಡೆ.

‘ನಿಮ್ಮ ಬಳಿ ಅಂತ ಹೇಳಿ’ ಎಂದು ಕೊಂಕಿದಳು.

‘ಆದರೆ ಬೇರೆ ಸವಾಲುಗಳಿವೆ. ನೆಹರೂ– ಗಾಂಧಿ ಕುಟುಂಬ ಇಲ್ಲದೆ ಕಾಂಗ್ರೆಸ್‍ಗೆ ಭವಿಷ್ಯ ಇದೆಯೇ?’

‘ಇದೆ ಅಂತ ಕೆಲವರು ಬಹಿರಂಗವಾಗಿ, ಕೆಲವರು ಗುಟ್ಟಾಗಿ ಹೇಳ್ತಾರೆ. ಉಳಿದವರು ನೆಹರೂ– ಗಾಂಧಿ ಕುಟುಂಬ ಇಲ್ಲದೆ ಪಕ್ಷ ಇರಲಿಕ್ಕೆ ಸಾಧ್ಯವೇ ಇಲ್ಲ ಎಂದು ಘಂಟಾಘೋಷವಾಗಿ ಸಾರ್ತಿದ್ದಾರೆ.

ಅಂದರೆ ಶಿಂಧೆಸೇನೆಗೆ ಭವಿಷ್ಯ ಇರಲೂಬಹುದು. ಉತ್ತರ ಮತದಾರರಿಗೆ ಮಾತ್ರ ಗೊತ್ತಿರುತ್ತೆ’.

‘ಮತ್ತೆ ನಮ್ಮ ಜೆಡಿಎಸ್‍ನ ಭವಿಷ್ಯ ಏನು?’

‘ಉಜ್ವಲವಾಗಿರುತ್ತದೆ ಅಂತ ಕುಮಾರಣ್ಣ ಹೇಳ್ತಿದಾರೆ. ಇನ್ನೇನು?’

‘ಅಲ್ಲಾ, ಒಂದು ವೇಳೆ ನಮ್ಮ ದೇವೇಗೌಡರು ರಾಷ್ಟ್ರಪತಿಯಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರೆ ಆಗ ಜೆಡಿಎಸ್ ಗತಿ ಏನಾಗ್ತಿತ್ತು?’

‘ಅಂದರೆ ಗೌಡರು ಅವರ ಪಕ್ಷಕ್ಕೆ ಇನ್‍ಡಿಸ್ಪೆನ್ಸಬಲ್ ಅಂತ ತಾನೆ ನೀನು ಹೇಳ್ತಿರೋದು?’

‘ಅಲ್ವೇ ಮತ್ತೆ?’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು