ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪ್ರಭು ನಿನ್ನ ಲೀಲೆ...

Last Updated 4 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರಭುಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು. ರಾಜ್ಯಭಾರ ವಿಪರೀತ ಭಾರವಾಗಿತ್ತು. ಮುಡಿಯಲ್ಲಿ ಹೈಕಮಾಂಡ್ ಹೇರಿಕೆ, ಜೊತೆಗೆ ಹೈ-ಡಿಮ್ಯಾಂಡ್ ತುರಿಕೆ ಹೆಚ್ಚಾಗಿ ಮೈ ಪರಚಿಕೊಳ್ಳುವಂತಾಗಿತ್ತು. ಆಗ ಸಹಾಯಕ ಬಂದು, ‘ಪ್ರಭು, ಸಹೋದ್ಯೋಗಿ ಸ್ನೇಹಿತರು ತಮ್ಮ ಭೇಟಿಗೆ ಬಂದಿದ್ದಾರೆ’ ಎಂದ.

ದೀರ್ಘ ನಿಟ್ಟುಸಿರೆಳೆದ ಪ್ರಭುಗಳು, ಬರಲು ಹೇಳಿದರು. ‘ಸ್ವಾಮಿ ದೇವನೆ, ಪಕ್ಷಪಾಲನೆ... ಪ್ರೇಮದಿಂದಲಿ ಸಲಹು ನಮ್ಮನು...’ ಎಂದು ಹಾಡಿ-ಹೊಗಳುತ್ತಾ ಬಂದರು.

‘ಪ್ರಭು, ಕೊಟ್ಟ ಮಾತು ಉಳಿಸಿಕೊಳ್ಳುವ ಪುಣ್ಯಕೋಟಿ ತಾವು. ಸ್ಥಾನ-ಮಾನ ನೀಡುವುದಾಗಿ ನಮಗೆ ಕೊಟ್ಟ ಮಾತು ಉಳಿಸಿಕೊಂಡರೆ ತಮಗೆ ಕೋಟಿ ಪುಣ್ಯ ಬರುತ್ತದೆ...’ ಎಂದರು.

‘ನನ್ನ ಆಸ್ಥಾನ, ಸಂಸ್ಥಾನವೇ ಅಲ್ಲಾಡುತ್ತಿದೆ...’ ಎಂದು ಸಿಟ್ಟುಗೊಂಡರೂ ಸಮಾಧಾನ ತಂದುಕೊಂಡ ಪ್ರಭುಗಳು, ‘ನಿಮ್ಮ ಕೈಬಿಡುವುದಿಲ್ಲ, ಸತ್ಯ ವಾಕ್ಯವ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು...’ ಎಂದರು.

‘ಆದರೆ ಪ್ರಭು, ದೆಹಲಿ ದೊರೆಗಳು ತಮ್ಮ ಕುರ್ಚಿಗೆ ಮುಳ್ಳು ಇಡುತ್ತಿದ್ದಾರಲ್ಲ. ಆ ಮುಳ್ಳನ್ನು ಮುಳ್ಳಿನಿಂದ ತೆಗೆಯುವಿರೇ?’

‘ಮುಳ್ಳು ಬಹಳ ಬಾಧೆ ಕೊಡುತ್ತಿದೆ...’ ಪ್ರಭು ಸಂಕಟಪಟ್ಟರು.

‘ತಮ್ಮ ಸರ್ವೀಸಿನಲ್ಲಿ ಇಂಥಾ ಎಷ್ಟೋ ಮುಳ್ಳುಗಳನ್ನು ಕಿತ್ತು ಬಿಸಾಡಿದ್ದೀರಿ ಪ್ರಭು...’ ಹೊಗಳಿದರು.

‘ಆದರೂ ಮುಳ್ಳು ಕೀಳುವ ಹೊಸ ಅಸ್ತ್ರ, ಆಯುಧ ಬೇಕಲ್ಲ ಮಿತ್ರರೇ’.

‘ಪ್ರಭು, ತಾವು ಜಾತಿಗೊಂದು ನಿಗಮ ನೀಡಿ, ಆ ಜಾತಿಗಳ ಅಭಿವೃದ್ಧಿ ಸುಗಮ ಮಾಡುತ್ತಿದ್ದೀರಿ...’

‘ಹೌದು, ಅಭಿವೃದ್ಧಿಯ ವಿಕೇಂದ್ರೀಕರಣ, ಅವರವರ ಅಭಿವೃದ್ಧಿಯನ್ನು ಅವರೇ ಮಾಡಿಕೊಳ್ಳಲೆಂದು’.

‘ತೃಪ್ತಗೊಂಡಿರುವ ಜಾತಿ, ವರ್ಗಗಳು ನಿಮ್ಮ ಬೆನ್ನಿಗಿವೆ, ಸಾಲದ್ದಕ್ಕೆ ಗುರುವರ್ಯರ ಕೃಪಾಶೀರ್ವಾದವಿದೆ. ಗುರುಗಳು ಗುಡುಗಿದರೆ ದೆಹಲಿ ದೊರೆಗಳು ಉಳಿದಾರೆಯೇ, ನಡುಗಿ ಹೋಗುವರು, ಇನ್ನೇಕೆ ಭಯ...ಹಹ್ಹಹ್ಹಹ’.

ಪ್ರಭುಗಳ ಮುಖದಲ್ಲಿ ಮಂದಹಾಸ ಮಿನುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT