ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಲ್ ಸ್ಕೀಮ್

Last Updated 2 ಜೂನ್ 2021, 19:30 IST
ಅಕ್ಷರ ಗಾತ್ರ

ಚಟ್ನಿಹಳ್ಳಿಯಲ್ಲಿ ಕೋವಿಡ್ ಉಲ್ಬಣವಾಗಿತ್ತು. ಪರಿಶೀಲನೆಗೆ ಶಾಸಕರು ಬಂದಿದ್ದರು.

‘ಎಲ್ಲರೂ ಮಾಸ್ಕ್ ಧರಿಸಿ, ಮನೆಯಿಂದ ಹೊರಬರಬೇಡಿ, ಸೋಂಕಿತರು ಮನೆಯಲ್ಲಿರಬೇಡಿ, ಕೋವಿಡ್ ಕೇರ್ ಸೆಂಟರ್ ಸೇರಿಕೊಳ್ಳಿ’ ಎಂದು ಜನಜಾಗೃತಿ ಮೂಡಿಸಿದರು.

‘ನಾವೇನೋ ಮನೆಯಲ್ಲಿರುತ್ತೇವೆ, ಮಕ್ಕಳನ್ನು ದನ ಕಟ್ಟಿದಂತೆ ಮನೆಯಲ್ಲಿ ಕಟ್ಟಿಹಾಕಲಾಗುತ್ತಾ ಸಾರ್? ಪ್ರೈಮರಿ ಶಾಲೆ ಮಕ್ಕಳು ಸ್ಕೂಲ್ ಮುಖ ನೋಡಿ ವರ್ಷ ಆಯ್ತು’ ಅಂದ ಒಬ್ಬ.

‘ಕೊರೊನಾ ಕಾಲದಲ್ಲಿ ಶಿಕ್ಷಕರೇ ಮಕ್ಕಳ ಮನೆಗೆ ಬಂದು ಪಾಠ ಹೇಳುವ ವ್ಯವಸ್ಥೆ ಜಾರಿಗೆ ತನ್ನಿ’ ಎಂದ ಇನ್ನೊಬ್ಬ.

‘ಸದ್ಯಕ್ಕೆ ಮುಚ್ಚಿರುವ ಶಾಲೆಯನ್ನು ತೆರೆಯುತ್ತೇವೆ’ ಅಂದ್ರು ಶಾಸಕರು.

‘ಸ್ಕೂಲ್ ಶುರು ಮಾಡ್ತೀರಾ ಸಾರ್?’

‘ಅಲ್ಲ, ಸ್ಕೂಲನ್ನು ಕೋವಿಡ್ ಕೇರ್ ಸೆಂಟರ್ ಮಾಡಿ ಸೋಂಕಿತರಿಗೆ ಅಡ್ಮಿಷನ್ ಕೊಡ್ತೀವಿ, ಅಲ್ಲಿ ಕೊರೊನಾ ಪಾಠ ಹೇಳ್ತೀವಿ’.

‘ಶಿಕ್ಷಣ ಇಲಾಖೆಗೆ ಕೊರೊನಾ ಪಾಠ ಹೇಳುವ ಕೆಲಸ ವಹಿಸ್ತೀರಾ?’

‘ಕೊರೊನಾ ಕಂಟ್ರೋಲಿಗೆ ಬರೋವರೆಗೂ ಎಲ್ಲಾ ಇಲಾಖೆಗಳನ್ನು ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ತೀವಿ. ಆರೋಗ್ಯ ಇಲಾಖೆ ಇಂಜೆಕ್ಷನ್, ಮಾತ್ರೆ ಕೊಡುತ್ತೆ, ಆಹಾರ ಇಲಾಖೆ ಆಹಾರ ವಿತರಿಸುತ್ತದೆ. ಪಶು ಇಲಾಖೆ ಸೋಂಕಿತರ ದನಕರು, ಕುರಿಮೇಕೆಗಳ ಮೇವು, ನೀರಿನ ವ್ಯವಸ್ಥೆ ಮಾಡುತ್ತೆ, ಕೃಷಿ ಇಲಾಖೆ ಸೋಂಕಿತರ ಖಾಲಿ ಹೊಲದಲ್ಲಿ ಕೃಷಿ ಮಾಡುತ್ತೆ...’

‘ಅಬಕಾರಿ ಇಲಾಖೆ ಎಣ್ಣೆ ಹಂಚುವುದಾ ಸಾರ್?’

‘ಇಲ್ಲ, ಸ್ಯಾನಿಟೈಸರ್ ಹಂಚುತ್ತದೆ, ಕುಡಿಯಲು ಅಲ್ಲ, ಕೈ ತೊಳೆದುಕೊಳ್ಳಲು...’ ರೇಗಿದರು ಶಾಸಕರು.

‘ಹೀಗಾದರೆ ಇಲಾಖೆಗಳ ಮೂಲ ಯೋಜನೆಗಳು ಮೂಲೆಗುಂಪಾಗುತ್ತವೆ ಸಾರ್?’

‘ಹೆಲ್ತ್ ಎಮರ್ಜೆನ್ಸಿ ಅಂತ ಎಲ್ಲಾ ಇಲಾಖೆಗಳ ಅನುದಾನ, ಸಿಬ್ಬಂದಿ ಬಳಸಿಕೊಂಡು ಕೋವಿಡ್ ಕಂಟ್ರೋಲ್ ಮಾಡುವ ಸಿಂಗಲ್ ಸ್ಕೀಂ ಜಾರಿಗೆ ತಂದಿದ್ದೇವೆ...’ ಎನ್ನುತ್ತಾ ಶಾಸಕರು ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT