ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಾಗಕ್ಕ- ಗುಬ್ಬಕ್ಕರ ಕಥೆ

Published 7 ಆಗಸ್ಟ್ 2023, 23:31 IST
Last Updated 7 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಲಿಂಗರಾಜು ಡಿ.ಎಸ್.

ಕಾಗಕ್ಕ, ಗುಬ್ಬಕ್ಕ ಮಾತಾಡ್ಕತಿದ್ದೋ. ‘ನೋಡಿದೇನೆ ಕಾಗಕ್ಕ, ರಾಜಕೀಯದೋವು ಅಪ್ಪಂತ ಮಾತಾಡದು ಬುಟ್ಟು ‘ಅವನ ತಲೆ ಕರಕಲಾಗ್ಯದೆ, ತುಪ್ಪವ ಕಮಲಕ್ಕನೇ ಕೊಟ್ಟಿರನಿಲ್ಲ’ ಅಂತ ಬ್ಯಾಡದ ಸಂಗ್ತಿ ಮಾತಾಡಿಕ್ಯಂಡೇ ಕಾಲ ಕಳೀತಾವೆ’ ಅಂದಳು ಗುಬ್ಬಕ್ಕ.

‘ಹ್ಞೂಂ ಕಣಕ್ಕ, ಸರ್ಕಾರವೂ ಗ್ಯಾರೆಂಟಿ ಕನಸಿಂದ ಆಚೆಗೆ ಬಂದುಲ್ಲ. ಮುಂದ್ಲ ಎಲೆಕ್ಷನ್ನು ಗೆಲ್ಲದೆಂಗೆ ಅಂತ ಬಾಯಿಗೆ ಅಕ್ಕಿಕಾಳು ಹಾಕ್ಕ್ಯಂಡು ಕುಂತವಂತೆ’ ಅಂತಂದ್ಲು ಕಾಗಕ್ಕ.

‘ಅಕ್ಕಿಕಾಳು ಎಲ್ಲಿದ್ದವಮ್ಮಿ? ನಾನೇ ಅಕ್ಕಿ ಕಾಳು ಕಂಡು ವರ್ಸಾಯ್ತು. ಜೋರಾಗಿ ನುಲಿಬ್ಯಾಡ ಕನೇ ಅಮ್ಯಾಲೆ ಹುಲಿ ಸಿದ್ದಣ್ಣ ‘ಎಲ್ಲ್ಯದೆ ಅಕ್ಕಿ!’ ಅಂತ ಬಂದುಗಿಂದಾನು’ ಗುಬ್ಬಕ್ಕ ಎಚ್ಚರಿಸಿದಳು.

‘ಕಮಲಕ್ಕನ ಮನೇವು ಮೂವತ್ತು ಕಾಂಗ್ರೆಸ್ ಹಕ್ಕಿಗಳಿಗೆ ಕಾಳಾಕ್ಯವಂತೆ. ಹದಿನೇಳು ಜನ ಪಾಲು ಕೇಳಿ ಸರ್ಕಾರದ ಬಾಯಿಗೆ ಮಣ್ಣಾಕಿದ್ದು ನೀನು ಕಾಣಾ’ ಕಾಗಕ್ಕ ನೆನಪಿಸಿದಳು.

‘ಕಮಲದವೇನು ಕಿಸಿದಿದ್ದೋ ತಗಾ. ಕಾಂಗ್ರೆಸಿನವು ಕಮೀಶನ್ನು, ಪೇಸಿಎಂ ಅಂತ ಕೈಮದ್ದು ಇಕ್ಕಿದ್ವಲ್ಲಾ. ಅಧಿಕಾರ ಬಂದ ಮ್ಯಾಲೆ ಆ ಸುದ್ದೀನೇ ಕಾಣೆ. ಈಗ ಕೆಲಸಿಲ್ಲದ ಕುಮಾರಣ್ಣ ಎಳನೀರು ಬಂಬಲು ಗೋರಿಕ್ಯಂಡು ಕುಂತವ್ನೆ’ ಗುಬ್ಬಕ್ಕ ಪುಳ್ಳೆ ಹಾಕಿದಳು.

‘ಯವ್ವ ನನಕೆಟ್ಟೆ! ಕಾಸೆಲ್ಲಾ ಇವರತಾವ್ಕೆ ಹೋಗಿ ಜನ ಎಡಗೈಲೂ ನಮ್ಮನ್ನ ಓಡಿಸ್ತಿಲ್ಲ ಕವ್ವ. ನಾವೂ ಕ್ರಿಕೆಟ್ ಹೈಕ್ಳೋ, ಬಿಬಿಎಂಪಿ-ಬಿಡಿಎಗಳೋ ಆಗಿದ್ರೆ ಕಾಸಾದ್ರು ನೋಡಬೈದಿತ್ತು’ ಕಾಗಕ್ಕ ಬಲು ನೊಂದುಕೊಂಡಳು.

‘ಅಯ್ಯೋ ಬುಡ್ತು ಅನ್ನವ್ವ. ಸಾವ್ರ, ಲಕ್ಷ ಕಾಸು ಕೊಟ್ರೆ ಕೆಲಸವಂತೆ. ಕ್ರಿಕೆಟ್ಟಿನೋರು ದೇಸಕ್ಕೋಸ್ಕರ ಯಾವತ್ತಾದ್ರೂ ಆಡಿದ್ದರೇ. ಇವುನ್ನ ಹಿಡಕಂದು ವದರಿದ್ರೆ ವರ್ಸದ ಅಕ್ಕಿ ಗ್ಯಾರೆಂಟಿಗೆ ಆಗೋವಷ್ಟು ಕಾಸು ಗುಡ್ಡೆ ಬೀಳ್ತದೆ’ ಗುಬ್ಬಕ್ಕ ನಿಟ್ಟುಸಿರುಬುಟ್ಟಳು.

‘ಬ್ಯಾರೇರ ಇಚಾರ ನಮಗ್ಯಾಕೆ ತಾಯಿ. ನಾವೂ ಮೋದಿ ಮಾವನಂಗೆ ಸುಮ್ಮಗಿರದು ಕಲೀಬೇಕು’ ಅಂದ ಕಾಗಕ್ಕ ಕಾವ್, ಕಾವ್ ಅಂತ ಹಾರಿಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT