ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೈನ್‌’ ಮಾಲೆ!

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೈಕ್‌ನಲ್ಲಿ ವೇಗವಾಗಿ ಹೊರಟಿದ್ದ ವಿಜಿಗೆ ದುಃಸ್ವಪ್ನದಂತೆ ಎದುರಾದರು ಟ್ರಾಫಿಕ್‌ ಪೊಲೀಸ್‌. ‘ನಿಲ್ಲಿ, ನಿಲ್ಲಿ... ಹೆಲ್ಮೆಟ್‌ ಎಲ್ಲಿ’ ಪ್ರಶ್ನಿಸಿದ ಪೊಲೀಸಪ್ಪ. ‘ಅರ್ಜೆಂಟ್‌ ಹೋಗಬೇಕಿತ್ತು. ಹೆಲ್ಮೆಟ್‌ ತರೋದು ಮರೆತುಬಿಟ್ಟೆ ಸಾರ್‌’.

‘ಒಳ್ಳೆಯದಾಯ್ತು. ಸಾವಿರ ರೂಪಾಯಿ ಫೈನ್‌ ಕಟ್ಟಿ. ಮೂರು ತಿಂಗಳು ನಿಮ್ಮ ಡಿಎಲ್‌ ಸಸ್ಪೆಂಡ್‌ ಮಾಡ್ತಾರೆ. ಎಲ್ಲಿ ಡಿಎಲ್‌ ಕೊಡಿ’.

‘ಡಿಎಲ್‌ ಮಾಡಿಸೋಕೆ ಇನ್ನೂ ಟೈಂ ಸಿಕ್ಕಿಲ್ಲ ಸಾರ್‌’ ಜೇಬಿಗೆ ದೊಡ್ಡ ಕತ್ತರಿ ಬೀಳುತ್ತದೆಂಬ ದೃಢವಾದ ನಂಬಿಕೆಯಿಂದ ಕೀರಲು ದನಿಯಲ್ಲಿ ಹೇಳಿದ ವಿಜಿ.

‘ಡಿಎಲ್‌ ಇಲ್ಲದ್ದಕ್ಕೆ 5 ಸಾವಿರ ರೂಪಾಯಿ, ಹೆಲ್ಮೆಟ್‌ ಹಾಕದ್ದಕ್ಕೆ ಸಾವಿರ’ ಬಿಲ್‌ ಹರಿದು ಕೈಗಿತ್ತ ಪೊಲೀಸಪ್ಪ. ‘ಇದೇನ್‌ ಸಾರ್, ಸಿಎಂ ಸಾವಿರ ಅಂತಾ ಹಾಕಿದೀರಿ. ಇದ್ಯಾವ ಫೈನ್‌?’

‘ಅದು ಸಾಗರಮಾಲಾ ಯೋಜನೆಗೆ ಕಲೆಕ್ಟ್‌ ಮಾಡ್ತಿರೊ ದುಡ್ಡು’ ಮುಖ ನೋಡದೆ ಉತ್ತರ ನೀಡಿದರು ಸಾಹೇಬ್ರು.

‘ಆ ಮಾಲೆಗೂ, ನನಗೆ ಡಿಎಲ್‌ ಇಲ್ಲದ್ದಕ್ಕೂ ಎಲ್ಲಿಯ ಸಂಬಂಧ ಸಾರ್‌? ತಮಾಷೆ ಹೆಸರಲ್ಲಿ ನೀವು ನಮ್ಮ ಯೋಜನೆಗಳಿಗೆ ಅವಮಾನ ಮಾಡ್ತಿದ್ದೀರಿ’ ಸಿಟ್ಟಿನಲ್ಲಿಯೇ ಹೇಳಿದ ವಿಜಿ.

‘ಯೋಜನೆಗಳ ಉದ್ದೇಶದ ಬಗ್ಗೆ ನಮಗೆ ಗೌರವ ಇದೆ ರೀ. ಆದರೆ, ಇದು ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ಆರು ಸಾವಿರ ಕಟ್ಟೋನಿಗೆ ಇನ್ನೊಂದು ಸಾವಿರ ಹೆಚ್ಚಾಗುತ್ತಾ? ಫೈನ್‌ ಎಷ್ಟೇ ಜಾಸ್ತಿ ಮಾಡಿದರೂ ನೀವ್ಯಾರೂ ಕೇಳೋದಿಲ್ಲ ಅಂತ ಸರ್ಕಾರಕ್ಕೆ ಗೊತ್ತು. ಅದಕ್ಕೆ ಇದೊಂದು ಸೇರಿಸಿದ್ದಾರೆ. ಜಾಸ್ತಿ ಮಾತನಾಡಿದರೆ, ಪ್ರೈಮ್‌ ಮಿನಿಸ್ಟರ್‌ ಸಾಹೇಬ್ರ ವಿದೇಶಿ ಪ್ರವಾಸದ ವೆಚ್ಚವನ್ನೂ ನಿಮ್ಮಿಂದಲೇ ಕಿತ್ಕೊಬೇಕಾಗುತ್ತೆ. ತೆಗೀರಿ, ತೆಗೀರಿ’ ಪೊಲೀಸಪ್ಪನ ಮಾತು ಗಡುಸಾಯಿತು.

ಬಿಲಿಯನ್‌ ಡಾಲರ್‌ ಸಾಲದ ಭರವಸೆ ಪಡೆದ ರಷ್ಯಾದಂತೆ ಪೊಲೀಸಪ್ಪ ಖುಷಿಯಲ್ಲಿದ್ದರೆ, ಇದ್ದುದನ್ನೂ ಕಳೆದುಕೊಂಡ ಆರ್‌ಬಿಐನಂತೆ ಸಪ್ಪೆ ಮೋರೆ ಹಾಕಿಕೊಂಡು ಹೊರಟ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT