ಗುರುವಾರ , ಸೆಪ್ಟೆಂಬರ್ 23, 2021
20 °C

ಚುರುಮುರಿ: ಯಾರು ಮಾದರಿ?

ಚಂದ್ರಕಾಂತ ವಡ್ಡು Updated:

ಅಕ್ಷರ ಗಾತ್ರ : | |

ತಿಂಗಳೇಶ ಅನೇಕ ವಿಷಯಗಳಲ್ಲಿ ತನಗೆ ತಾನೇ ಮಾದರಿ. ಅವನು ಕದ್ದಾಲಿಸಲು ಪೆಗಾಸಸ್ ಮೊರೆ ಹೋಗಿ ಸಿಕ್ಕಿಬೀಳುವ ಪೈಕಿ ಅಲ್ಲ. ಅವನಿಗೆ ಗೂಢಚರ್ಯೆ ಮಾಡಲು ತನ್ನ ಮನೆಯ ಟೆರೇಸ್ ಸಾಕು. ಅಲ್ಲಿ ವಾಕ್ ಮಾಡುವಾಗ ನೆರೆಮನೆಯವರ ಟಾಕ್‌ಗಳು ತಿಂಗಳೇಶನ ಕಿವಿಯೊಳಗೆ ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಸಪ್ಪೆ- ಎಲ್ಲಾ ತುಂಬಿಸುತ್ತವೆ. ಬೆಳಿಗ್ಗೆ ಪಕ್ಕದ ಮನೆಯ ಮಧ್ಯಮವರ್ಗದ ಕುಟುಂಬದಲ್ಲಿ ಶುರುವಾಯ್ತು ಸಂಭಾಷಣೆ.

‘ರೀ… ಪೇಪರ್ ಓದಿದ್ರಾ…?’ ವಾಟ್ಸ್‌ಆ್ಯಪ್‌ ನಲ್ಲಿ ತಲ್ಲೀನನಾಗಿದ್ದ ಗಂಡ, ‘ಹ್ಞೂಂ’ ಎಂದು ಎಂದಿನಂತೆ ಸುಳ್ಳು ಉದುರಿಸಿದ. ‘ನೋಡಿ, ಮುಖ್ಯಮಂತ್ರಿಗಳು ವಾಹಿನಿಯಲ್ಲಿ ಮಕ್ಕಳೊಂದಿಗೆ ಖುಷಿಯಿಂದ ಮಾತಾಡಿ ಹಾಡು ಗುನುಗಿದ್ದಾರೆ’.

‘ಹೌದ್ಹೌದು, ಅವರಿಗೆ ಹೋದಲ್ಲೆಲ್ಲಾ ಗೌರವ ವಂದನೆ, ಜೀರೊ ಟ್ರಾಫಿಕ್, ಹಾರತುರಾಯಿ ಬೇಡವಂತೆ. ಎಲ್ಲ ಮಂತ್ರಿಗಳಿಗೂ ಮಾದರಿ ಆಗಿದ್ದಾರೆ ನೋಡು’.

‘ಮಂತ್ರಿಗಳಿಗೆ ಮಾದರಿ ಅನ್ನೋದನ್ನ ಮಾತ್ರ ನಾನು ಒಪ್ಪೋದಿಲ್ಲ...’ ಅಭಿಪ್ರಾಯಭೇದ ನುಸುಳಿತು. ‘ಹೋಗಲಿ ಬಿಡು, ಮಕ್ಕಳಿಗಾದರೂ ಮಾದರಿ ಆಗಿದ್ದಾರಲ್ಲ’.

‘ಅವರು ಮಕ್ಕಳಿಗೆ ಹೇಗೆ ಮಾದರಿ ಆಗ್ತಾರೆ?’ ಭಿನ್ನಮತ ಬಹಿರಂಗವಾಯಿತು. ನೀವು ಮೂರು ಹೊತ್ತೂ ವಾಟ್ಸ್‌ಆ್ಯಪ್‌ನಲ್ಲಿ ಮುಳುಗಿರುತ್ತೀರಿ. ಎಂದಾದರೂ ಫೇಸ್‌ಬುಕ್ ನೋಡೀರೇನು?’

ಮೊನ್ನೆ ಮೊನ್ನೆ ಸ್ಮಾರ್ಟ್ ಫೋನ್ ಕೊಡಿಸಿ ಕೊಂಡ ಹೆಂಡತಿ ಫೇಸ್‌ಬುಕ್ ತನಕ ಬೆಳೆದಿದ್ದು ತಿಳಿದು ಗಂಡ ಗಾಬರಿಗೊಂಡ.

‘ನಮ್ಮ ಮುಖ್ಯಮಂತ್ರಿ ಹಗಲೂರಾತ್ರಿ ಫೇಸ್‌ಬುಕ್ಕಿನಲ್ಲಿ ಆ್ಯಕ್ಟಿವ್ ಆಗಿರ್ತಾರೆ. ಕುಂತಿದ್ದು, ನಿಂತಿದ್ದು, ನೀರು ಕುಡಿದಿದ್ದು, ಉಂಡಿದ್ದು, ಉಸಿರಾಡಿದ್ದು ಎಲ್ಲಾ ಫೋಟೊಗಳನ್ನು ಹಂಚಿಕೊಳ್ಳೋದೇ ಅವರ ಕೆಲಸ. ಅವರ ಮಂತ್ರಿಗಳೂ ಇದನ್ನೇ ‘ಮಾದರಿ’ ಮಾಡಿಕೊಂಡರೆ ಸರ್ಕಾರ ನಡೆಯೋದು ಹೇಗೆ?’

‘ಮಮ್ಮೀ... ಫೇಸ್‌ಬುಕ್ ತೆಗೆದರೆ ನನಗ ಸುಮ್ಮನೆ ಬೈತಿ. ನಮ್ಮ ಮುಖ್ಯಮಂತ್ರಿ ನೋಡಿ ನೀನೂ ಕಲಿ’– ಮಗಳ ಸಲಹೆ ಇಬ್ಬರಿಗೂ ಬ್ರೇಕ್ ತೆಗೆದುಕೊಳ್ಳುವ ಸಮಯ ನೆನಪಿಸಿತು!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.