ಸೋಮವಾರ, ಸೆಪ್ಟೆಂಬರ್ 20, 2021
21 °C

ಚುರುಮುರಿ: ಸಿಎಂಪಿಕ್ಸ್ ಪಂದ್ಯ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೆ. ಬೆಕ್ಕಣ್ಣ ಅದೇನು ಮಹಾ ಎಂದು ಮೂಗು ಮುರಿದು, ‘ಒಲಿಂಪಿಕ್ಸಿನಾಗೆ ವೇಟ್ಲಿಫ್ಟಿಂಗ್ ಮಾಡೂದೇನ್ ಮಹಾ ಅಲ್ಲೇಳು. ಸಿಎಂಪಿಕ್ಸಿನಾಗೆ ಕುರ್ಚಿ ಲಿಫ್ಟ್ ಮಾಡಿ, ಕೂಡೂದೆ ದೊಡ್ಡದು’ ಎಂದಿತು.

‘ಕೋವಿಶೀಲ್ಡ್ ಇದ್ದರೆ ಕೋವಿಡ್ ಗೆದೀಬೌದು, ಕಾವಿಶೀಲ್ಡ್ ಇದ್ದರೆ ಸಿಎಂಪಿಕ್ಸ್ ಗೆದೀಬೌದು... ದೊಡ್ಡ ಮಹಾ ನಿನ್ನ ಸಿಎಂಪಿಕ್ಸ್’ ಎಂದು ನಾನೂ ಹಂಗಿಸಿದೆ.

‘ಕೋವಿಶೀಲ್ಡ್ ಎಲ್ಲಾ ಕಡಿಗೂ ಸಿಗತೈತಿ. ಕಾವಿಶೀಲ್ಡ್ ನಮ್ಮ ಯೆಡ್ಯೂರಜ್ಜಾರಿಗೆ ಮಾತ್ರ ಸಿಗತೈತಿ’ ವಾದಿಸಿದ ಬೆಕ್ಕಣ್ಣ ಹೊರಹೋಗಲು ತಯಾರಾಯಿತು.

‘ಏನಲೇ... ಕಾವಿಶೀಲ್ಡ್ ಸಾಮರ್ಥ್ಯ ನೋಡಾಕೆ ಅರಮನೆ ಮೈದಾನಕ್ಕೆ ಹೊಂಟೀಯೇನ್’ ಎಂದೆ.

‘ಯೆಡ್ಯೂರಜ್ಜಾರು ಕುರ್ಚಿ ಬಿಟ್ಟಿಳಿಯೂದೆ ಆತಂದ್ರ ಆಪ್ತರನ್ನ ತಮಗೆ ಬೇಕಾದ ಕುರ್ಚಿವಳಗೆ ಕೂರಿಸ್ತಾರಂತ. ಪಶುಸಂಗೋಪನಾ ಇಲಾಖೆನಾರೂ ನನಗ ಕೊಡ್ರೀ ಮತ್ತ, ನಾನೂ ಹುಲಿವಂಶಸ್ಥನೇ ಅದೀನಿ ಅಂತ ಹೇಳಾಕೆ ಡಾಲರ್ಸ್ ಕಾಲನಿ ಅಜ್ಜಾರ ಮನಿಗಿ ಹೊಂಟೀನಿ’ ಎಂದಿತು.

ಬಗಲಲ್ಲಿ ಹಾಳೆಗಳ ಕಂತೆಯಿಟ್ಟುಕೊಂಡಿದ್ದು ಕಾಣಿಸಿತು. ಅದೇನೆಂದು ಕುತೂಹಲವಾಯಿತು.
‘ಹೊಸ ವೋಟರ್ಲಿಸ್ಟ್... ಮುಂದಿನ ಚುನಾವಣೆಗೆ ಇದೇ ಬೇಕಾಗತೈತಿ’ ಎಂದು ಮುಗುಮ್ಮಾಗಿ ಹೇಳಿತು. ಅರೆ... ಚುನಾವಣಾ ಆಯೋಗ ನೋಟಿಸು ಕೊಟ್ಟಿತ್ತೆ, ನನ್ನ ವಿಳಾಸ ಬದಲಾಗಿದ್ದನ್ನು ಸೇರಿಸಬೇಕೆ ಎಂದೆಲ್ಲ ಯೋಚಿಸುವಷ್ಟರಲ್ಲಿ ಬೆಕ್ಕಣ್ಣ ನುಲಿಯುತ್ತ ಹೇಳಿತು.

‘ನೀವು ಪುಟಗೋಸಿ ಶ್ರೀಸಾಮಾನ್ಯರು, ನಿಮ್ಮದೆಲ್ಲ ಈ ಹೊಸ ಪಟ್ಟಿವಳಗೆ ಇರಂಗಿಲ್ಲ. ಕರುನಾಡಿನ ವಟ್ಟು ಎಲ್ಲಾ ಮಠಾಧೀಶರ ವೋಟರ್ಲಿಸ್ಟ್ ರೆಡಿ ಮಾಡೀನಿ. ಇನ್‌ಮ್ಯಾಗೆ ಹಿರಿಕಿರಿಮರಿ ಸ್ವಾಮಿಗಳಷ್ಟೇ ವೋಟ್ ಮಾಡಿ, ಸಿಎಂ ಮತ್ತು ಉಳಿದ ಮಂತ್ರಿಗಳನ್ನ ಆರಿಸ್ತಾರ. ಇದೇ ವೋಟರ್ಲಿಸ್ಟ್ ಮುಂದ ವಿಜ್ಯಣ್ಣನ ಸಿಎಂ ಮಾಡಾಕೂ ಬೇಕಾಗತೈತಿ. ಇಷ್ಟ್ ದಿನ ನೀವು ಶ್ರೀಸಾಮಾನ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನಂಗಿದ್ರಿ. ಇನ್ನು ಮ್ಯಾಗೆ ಆಟಕ್ಕೂ ಇಲ್ಲ, ಲೆಕ್ಕಕ್ಕಂತೂ ಮದ್ಲೇ ಇಲ್ಲ, ತಿಳ್ಕೋರಿ’ ಬೆಕ್ಕಣ್ಣ ನನ್ನ ಮೂತಿಗೆ ತಿವಿದು ಅಜ್ಜಾರನ್ನು ಭೇಟಿಯಾಗಲು ಓಡಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.