ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗ್ರಹಗತಿ, ಏರುಗತಿ

Last Updated 18 ಫೆಬ್ರುವರಿ 2021, 21:20 IST
ಅಕ್ಷರ ಗಾತ್ರ

‘ಗುರೂಜಿ, ಸಿ.ಎಂ ಗ್ರಹಗತಿ ಈಗ ಹೇಗಿದೆ...?’ ಶಾಸಕರು ಕೇಳಿದರು.

ಸಿ.ಎಂ ಜಾತಕ ಪರಿಶೀಲಿಸಿದ ಗುರೂಜಿ, ಗ್ರಹಗತಿ, ಅಧೋಗತಿ, ಏರುಗತಿಗಳನ್ನು ಲೆಕ್ಕ ಹಾಕಿ, ‘ಸಿ.ಎಂಗೆ ಈಗ ಶತ್ರು ಬಾಧೆ, ಶಾಂತಿ ಭಂಗ ಇದೆ. ಆದರೆ, ಕುರ್ಚಿ ಭದ್ರವಾಗಿದೆ’ ಎಂದರು.

‘ಯುಗಾದಿಗೆ ಹಳೆ ಸಿ.ಎಂ ಹೋಗಿ, ಹೊಸ ಸಿ.ಎಂ ಬರ್ತಾರಾ ಗುರೂಜಿ?’

‘ಹಬ್ಬಕ್ಕೆ ಅಳಿಯ ಬರಬಹುದು, ಹೊಸ ಸಿ.ಎಂ ಬರುವ ಸಾಧ್ಯತೆ ಕಾಣ್ತಿಲ್ಲಾರೀ...’

‘ಯುಗಾದಿಗೆ ಸಿ.ಎಂ ಬದಲಾಗ್ತಾರೆ ಅಂತ ನಮ್ಮ ಆಸ್ಥಾನ ಪಂಡಿತರು ಭವಿಷ್ಯ ನುಡಿದಿದ್ದಾರೆ ಗುರೂಜಿ’.

‘ಹಬ್ಬ, ಹುಣ್ಣಿಮೆಗೆ ಬದಲಾಗಲು ಸಿ.ಎಂ ಕ್ಯಾಲೆಂಡರೇನ್ರೀ? ನಿಮ್ಮ ಪಂಡಿತರಿಗೆ ಕುರ್ಚಿ ದೋಷ ಇದೆ, ಪರಿಹಾರ ಮಾಡಿಕೊಳ್ಳಲು ಹೇಳಿ’ ಗುರೂಜಿಗೆ ಸಿಟ್ಟು ಬಂತು.

‘ಹಬ್ಬಹಬ್ಬಕ್ಕೂ ಒಬ್ಬಟ್ಟು ಅಲ್ಲ, ಯುಗಾದಿಗೆ ಹೋಳಿಗೆ, ಗಣೇಶ ಚತುರ್ಥಿಗೆ ಕಡುಬು, ಸಂಕ್ರಾಂತಿಗೆ ಪೊಂಗಲ್ ಇರುವಂತೆ ಹಬ್ಬ
ಹಬ್ಬಕ್ಕೂ ಸಿ.ಎಂ ಬದಲಾಗುವ ಪದ್ಧತಿ ಬರಬೇಕು...’ ಶಾಸಕರು ಆಸೆಪಟ್ಟರು.

‘ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಸಿ.ಎಂ ಮೇಲೆ ಮುನಿಸಿಕೊಂಡಿದ್ದೀರಿ ಅಲ್ವಾ?’

‘ಹೌದು ಗುರೂಜಿ, ಹಳೆಯ ಮಂತ್ರಿಗಳನ್ನು ಪಕ್ಷ ಸಂಘಟನೆಗೆ ನಿಯೋಜಿಸಿ, ನಮ್ಮಂಥವರನ್ನು ಮಂತ್ರಿ ಮಾಡಬೇಕು ಅನ್ನೋದು ನಮ್ಮ ಒತ್ತಾಯ’.

‘ನೀವು ಮಂತ್ರಿ ಸ್ಥಾನದ ಆಸೆ ಬಿಟ್ಟುಬಿಡಿ...’

‘ಯಾಕೆ ಗುರೂಜಿ, ನನಗೆ ಮಂತ್ರಿಯಾಗುವ ಶಕ್ತಿ, ಸಾಮರ್ಥ್ಯ ಇಲ್ಲವೇ?’

‘ಹಾಗಲ್ಲ, ನಿಮಗೆ ಮುಖ್ಯಮಂತ್ರಿಯಾಗುವ ಯೋಗ ಇದೆ. ಹತ್ತಾರು ಶಾಸಕರನ್ನು ಮಂತ್ರಿ ಮಾಡುವ ಯೋಗ್ಯತೆ ಇದೆ ನಿಮಗೆ’ ಎಂದರು ಗುರೂಜಿ.

ಶಾಸಕರು ರೋಮಾಂಚನಗೊಂಡರು. ‘ಹೌದೇ ಗುರೂಜಿ...?! ಇವತ್ತಿನಿಂದಲೇ ಸಿ.ಎಂ ಆಗಲು ಪ್ರಯತ್ನ ಮಾಡ್ತೀನಿ, ನನಗೆ ಆಶೀರ್ವಾದ ಮಾಡಿ...’ ಎಂದು ಶಾಸಕರು ಕಾಣಿಕೆ ಕೊಟ್ಟು, ಅಡ್ಡ ಬಿದ್ದು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT