ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವೈರಸ್‍ಗೂ ಗಡಿ ನಿರ್ಬಂಧ

Last Updated 1 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ ಫೋನ್ ಎತ್ತಿದ ಕೂಡಲೇ ‘ಇವತ್ತಿನ ಪೇಪರ್ ನೋಡಿದ್ಯಾ? ಕೊರೊನಾ ವೈರಸ್ ಓಡಿಸೋಕೆ ವಿಮಾನದಿಂದಲೇ ಔಷಧ ಸಿಂಪಡಣೆ ಮಾಡ್ತಾರಂತೆ, ಮಾರ್ಕೆಟ್‍ಗೆ ಹೋಗ್ಬೇಕಾದ್ರೆ ತಲೆಗೊಂದು ಟೋಪಿ ಹಾಕ್ಕೋ. ಔಷಧ ಬಿದ್ದು, ಇರೋ ನಾಲ್ಕು ಕೂದಲೂ ಉದುರಿಹೋಗತ್ವೆ’ ಎಂದು ರೇಗಿಸಿದ ಗೆಳೆಯ ಸೀನ.

‘ಏನಂತೆ ಸೀನಣ್ಣನ ಕತೆ?’ ಎನ್ನುತ್ತಾ ಮಡದಿ ಬಂದಳು. ವಿಷಯ ಕೇಳಿ, ‘ವಿಮಾನದಿಂದ ಔಷಧಿ ಸಿಂಪಡಿಸಿದ್ರೆ ಕೊರೊನಾ ವೈರಸ್ ನಿಜವಾಗಲೂ ಸಾಯತ್ವಾ? ಮನುಷ್ಯರೆತ್ತರದಲ್ಲಿ ಒಂದಷ್ಟು ದೂರ ಮುಂದೆ ಹೋಗೋ ವೈರಸ್‍ಗಳಿಗೆ ಆ ಔಷಧ ತಲುಪುತ್ತಾ?’ ಪ್ರಶ್ನೆಗಳನ್ನು ಸುರಿಸಿದಳು.

‘ನನಗೂ ಗೊತ್ತಿಲ್ಲ, ಅದಕ್ಕೆ ಪರ್ಮಿಷನ್ ಕೊಟ್ಟಿರೋರಿಗಂತೂ ಖಂಡಿತಾ ಗೊತ್ತಿರೋದಿಲ್ಲ. ಇದೆಲ್ಲಾ ಬಿಸಿನೆಸ್‍ ಕಳೆದುಕೊಂಡಿರುವ ವಿಮಾನ ಕಂಪನಿಗಳ ಕರಾಮತ್ತಿರಬೇಕು’ ಎಂದೆ.

‘ಈ ಔಷಧದ ತುಂತುರಿಗೆ ಸಿಕ್ಕೊಂಡು ಒಂದಷ್ಟು ವೈರಸ್‍ಗಳು ಸಾಯಬಹುದೂಂತ್ಲೇ ಅಂದ್ಕೊಳ್ಳೋಣ. ಆದರೆ, ವಿಮಾನ ಬೀಸೋ ರಭಸಕ್ಕೆ ಔಷಧ ಸೇರ್ಕೊಂಡಿರೋ ಗಾಳಿ, ಒಂದಷ್ಟು ವೈರಸ್‍ಗಳನ್ನ ಬೇರೆ ಊರಿನತ್ತ ತಳ್ಳಬಹುದಲ್ವಾ?’ ಎಂಬ ಲಾ ಪಾಯಿಂಟ್‍ ಹಾಕಿದಳು.

‘ಹೇಗೋ ಒಂದು, ಪೀಡೆ ತೊಲಗಿದರೆ ಸಾಕು’ ಎಂದು ಸೀರಿಯಸ್ಸಾಗಿ ಉತ್ತರಿಸಿದೆ.

‘ನೆರೆ ರಾಜ್ಯದವರು ಯಾರಾದರೂ ನಾಳೆ ಕೋರ್ಟಿನಲ್ಲಿ ಕೇಸ್ ಹಾಕಬಹುದು. ಕರ್ನಾಟಕದಿಂದ ವಿಮಾನದ ಮೂಲಕ ಓಡಿಸಿದ ವೈರಸ್‍ಗಳು ನಮ್ಮ ರಾಜ್ಯಕ್ಕೆ ನುಗ್ಗಿ ಹಾವಳಿ ನಡೆಸುತ್ತಿವೆ, ಅಲ್ಲಿಂದ ನಮಗೆ ಪರಿಹಾರ ಕೊಡಿಸಿ ಎಂದರೆ ಏನ್ಮಾಡೋದು? ಮೋಡ ಬಿತ್ತನೆ ಮಾಡಿ ನಮ್ಮಲ್ಲಿನ ಮಳೆ ಕಸಿದುಕೊಂಡರು ಎಂದು ಕೆಲವರು ಆರೋಪ ಮಾಡಿರ್ಲಿಲ್ವಾ?’ ಎಂದಳು.

‘ರಾಜ್ಯಗಳ ಮಧ್ಯೆ ಹೆದ್ದಾರಿ ಬ್ಲಾಕ್ ಮಾಡಿದ ಹಾಗೆ, ಏರ್‌ಸ್ಪೇಸ್‍ ಬಂದ್ ಮಾಡಬಹುದೇನೋ, ನಮ್ಮ ಸೈಂಟಿಸ್ಟ್‌ಗಳನ್ನು ಕೇಳಿ ನೋಡ್ತೀನಿ’ ಎಂದೆ.

‘ಇನ್ನರ್ಧ ಗಂಟೆಯೊಳಗೆ ಸ್ನಾನ ಮಾಡಿ ಬರದಿದ್ರೆ ನನ್ನ ಅಡುಗೆ ಮನೆ ಲಾಕ್‍ಡೌನ್ ಆಗತ್ತೆ. ತಿಂಡಿ ಸಿಗೋಲ್ಲ’ ಎನ್ನುತ್ತಾ ಮಡದಿ ಮುಗುಳ್ನಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT