ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಂಗಾಲಾದ ಕೊರೊನಣ್ಣ

Last Updated 13 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಕೊರೊನಣ್ಣನಿಗೆ ಖರೇ ಖರೇ ವಿಪರೀತ ಚಿಂತೆಗಿಟ್ಟುಕೊಂಡಿತು. ಯಾವ ಟಿ.ವಿಯವರೂ ಕ್ಯಾರೇ ಎನ್ನುತ್ತಿಲ್ಲ. ರುದ್ರಭಯಾನಕ ಹೆಡ್‌ಲೈನುಗಳನ್ನು ಕೊಟ್ಟು, ಕೊರೊನಾ ಸುದ್ದಿ ವದರುತ್ತಿದ್ದವರು, ಈಗ ಮಿಂಚಿ ಮಾಯವಾಗುವ ಸ್ಕ್ರಾಲ್‌
ಗಳಲ್ಲಿಯೂ ಇಷ್ಟು ಜನ ಸೋಂಕಿತರು, ಇಷ್ಟು ಜನ ಸತ್ತರು ಎಂದು ಇರುವೆಯೊಂದು ಕಡಿಯಿತು ಎಂಬಷ್ಟು ಸಹಜವಾಗಿ, ಅಗದಿ ಸೌಮ್ಯವಾಗಿ ಹೇಳುತ್ತಿದ್ದಾರೆ.

ಯಾವ ವಾಹಿನಿ ತಿರುಗಿಸಿದರೂ, ಇಡೀ ದಿನ ಒಂದೇ ಸೀರೆಯಲ್ಲಿ ಕಳೆದ ರಾಗಿಣಿ, ವಕೀಲರು ಬರಲಿ ಎಂದು ಸಂಜನಾ ಪಟ್ಟು ಹಿಡಿದಿದ್ದು, ಅತ್ತ ಕಂಗನಾ ವೈ ಶ್ರೇಣಿ ರಕ್ಷಕರ ನಡುವೆ ವೀರಯೋಧೆಯಂತೆ ಮುಂಬೈಗೆ ಬಂದಿಳಿದು ಟ್ವಿಟರ್ ಸಮರ ಸಾರಿದ್ದು... ಇವೇ ಸುದ್ದಿಗಳು.

‘ಯಾರಿಗೂ ಸಡ್ಡು ಹೊಡೆಯದ ಟ್ರಂಪಣ್ಣನ ಅಮೆರಿಕವನ್ನೇ ನಡುಗಿಸಿದೆ, ಇದಕ್ಕೆಲ್ಲ ಮೂಲಕಾರಣ ಎಂದು ಎಲ್ಲ ದೇಶಗಳು ಚೀನಾಗೆ ಬೈದುಕೊಳ್ಳುವಂತೆ ಮಾಡಿ, ಚೀನೀಯರ ಹಮ್ಮು ಇಳಿಸಿದೆ. ಎಲ್ಲಾರ ಪೌರತ್ವ ಕೇಳತೀರಲ್ಲ, ಪೌರತ್ವವೇ ಇಲ್ಲದ ನನ್ನ ಪೌರುಷ ನೋಡಿ ಎಂದು ಗೃಹಮಂತ್ರಿಗೇ ಅಟ್ಯಾಕ್ ಮಾಡಿದೆ. ಈಗ
ಅದ್ಯಾರೋ ಡ್ರಗ್ಗಣ್ಣ ಬಂದು ನನ್ನ ಟಿಆರ್‌ಪಿ
ಯನ್ನೆಲ್ಲ ಕಿತ್ತುಕೊಳ್ಳುವುದೇ... ಛೇ...’
ಕೊರೊನಣ್ಣನಿಗೆ ಮೈ ಪರಚಿಕೊಳ್ಳುವಂತಾಯಿತು. ಆ ಡ್ರಗ್ಗಣ್ಣ ಮೈಮನದಲ್ಲಿ ಏರಿಸುವ ನಶೆ ಕುರಿತು ಕುತೂಹಲವೂ ಆಯಿತು. ಒಂದ್ ಚಿಟಿಕೆ ಏರಿಸಿ ನೋಡಿಯೇಬಿಡೋಣವೆಂದು ಕೊರೊನಣ್ಣ ಡ್ರಗ್ಗಣ್ಣನಿಗೆ ಫೋನ್ ಹಚ್ಚಿದ.

ಬಲು ಹುಷಾರಿನಿಂದ ಮಾತಾಡಿದ ಡ್ರಗ್ಗಣ್ಣ ‘ನಮ್ಮದೆಲ್ಲ ಕ್ರಿಪ್ಟೋ ಕರೆನ್ಸಿ... ಗಾಂಧಿ ಮುತ್ಯಾನ ಹಳೇ ನೋಟು ಹಿಡಕಂಡು ಬಂದ್ರೆ ನಡೆಯಂಗಿಲ್ಲ’ ಎಂದ.

‘ಯಾವ ದೇಶದ ಕರೆನ್ಸಿ ಬೇಕು ಹೇಳು, ಅದ್ನೇ ಕೊಡಾಮು. ಎಲ್ಲಿ ಬರಬೇಕಣ್ಣ’ ಇವನ ಆತುರದಿಂದ ತುಸು ಅನುಮಾನಗೊಂಡ ಡ್ರಗ್ಗಣ್ಣ ಹೆಸರು ಕೇಳಿದ.

‘ನಾನು ಕೊರೊನಣ್ಣ’ ಎನ್ನುತ್ತಿರುವಂತೆ, ಇದೆಲ್ಲ ಆ ಸಿಸಿಬಿ ಪೊಲೀಸರದೇ ಕಿತಾಪತಿ ಎಂದುಕೊಂಡ ಡ್ರಗ್ಗಣ್ಣ ಮೆತ್ತಗೆ ಮೊಬೈಲಿನ ಸಿಮ್ ತೆಗೆದು ಕಮೋಡಿಗೆ ಒಗೆದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT